ದಾವಣಗೆರೆ: ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ದಾವಣಗೆರೆ ಸ್ಮಾರ್ಟ್ ಸಿಟಿ ಆಗಿದೆ ಎಂದು ಸಂದಸ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಆತ್ಮನಿರ್ಭರ ಕೃಷಿ ಮತ್ತು ಸಿರಿಧಾನ್ಯಗಳ ವರ್ಷಾಚರಣೆಯ ಮೇಳ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರ ಬಂದ ಮೇಲೆ ದಾವಣಗೆರೆ ಸ್ಮಾರ್ಟ್ ಸಿಟಿ ಅಭಿವೃದ್ಧಿ, ನೂತನ ರೈಲ್ವೆ ನಿಲ್ದಾಣ ಸ್ಥಾಪನೆ, ಎಸ್ ಟಿಪಿಐ ಕೇಂದ್ರ ಪ್ರಾರಂಭವಾಗಿದೆ. ರಾಜ್ಯ ಸರ್ಕಾರ ದಾವಣಗೆರೆಗೆ 350 ಕೋಟಿ ಅನುದಾನ ನೀಡಿದೆ ಎಂದು ತಿಳಿಸಿದರು.
ಸಿರಿಧಾನ್ಯ ಬಳಕೆಯಿಂದ ಆರೋಗ್ಯ ವೃದ್ಧಿಯಾಗುತ್ತಿದೆ. ರೈತರು ಹೆಚ್ಚಾಗಿ ಸಿರಿಧಾನ್ಯಗಳ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡುವಷ್ಟು ಸಿರಿಧಾನ್ಯ ಉತ್ಪಾದನೆ ಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷ ಸರ್ಕಾರದ ಮೇಲೆ ಶೇ.40 ಕಮಿಷನ್ ಆರೋಪ ಮಾಡುತ್ತಿದೆ. ಅವರ ಅಧಿಕಾರಾವಧಿಯಲ್ಲಿ ಕಮಿಷನ್ ಪಡೆಯುತ್ತಿದ್ದರು. ಈಗ ಅದನ್ನೇ ಪದೇ ಪದೇ ಹೇಳುವ ಮೂಲಕ ಸತ್ಯ ಎಂದು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಸುಳ್ಳು ನಂಬಬಾರದು. ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಬರಲಿದೆ. ರೈತ ಮೋರ್ಚಾ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕೂತಲ್ಲಿ ನಿಂತಲ್ಲಿ ಮಾತನಾಡಬೇಕು. ಜನರ ಮನೆ ಮನೆಗೆ, ಮನಕೆ ಯೋಜನೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ, ಶಾಸಕರಾದ ಎಸ್.ಎ. ರವೀಂದ್ರನಾಥ, ಎಸ್. ವಿ. ರಾಮಚಂದ್ರ,ಮಾಜಿ ಶಾಸಕ ಬಿ.ಪಿ. ಹರೀಶ್, ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಮೇಯರ್ ಜಯಮ್ಮ ಗೋಪಿನಾಯ್ಕ, ಎಸ್.ಎಂ. ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಬಿ.ಎಂ. ಸತೀಶ್, ಶಿವಪ್ರಸಾದ್, ಶಾಮನೂರು ಲಿಂಗರಾಜ್, ಅಣಬೇರು ಜೀವನ ಮೂರ್ತಿ, ಸಂಗಜ್ಜಗೌಡ್ರು ಇತರರು ಇದ್ದರು.



