ದಾವಣಗೆರೆ: ರಸಗೊಬ್ಬರ ಮಾರಾಟಗಾರರು ಏಪ್ರಿಲ್-1 ರಿಂದ ರಸಗೊಬ್ಬರ ಧಾರಣೆ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಲಭ್ಯವಿರುವ ಹಳೆಯ ದಾಸ್ತಾನು ರಸಗೊಬ್ಬರವನ್ನು ಚೀಲದ ಮೇಲಿನ ಮುದ್ರಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ 1985ರ ಅನ್ವಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ
ರಂಜಕಯುಕ್ತ ರಸಗೊಬ್ಬರಗಳ ಬೆಲೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸಹಕಾರ ರಸಗೊಬ್ಬರ ಮಾರಾಟಗಾರರು ರಸಗೊಬ್ಬರವನ್ನು ನಿಗದಿತ ದರಕ್ಕೆ ಅನುಗುಣವಾಗಿಯೇ ಮಾರಾಟ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ.
ರಸಗೊಬ್ಬರವನ್ನು ನಿಗದಿತ ದರದಲ್ಲಿ, ಪಿಓಎಸ್ ಉಪಕರಣದ ಮುಖಾಂತರವೇ ಮಾರಾಟ ಮಾಡಬೇಕು ಹಾಗೂ ಜಿಎಸ್‍ಟಿ ವಿವರಗಳನ್ನೊಳಗೊಂಡ ರಶೀದಿಯನ್ನು (ನಮೂನೆ-ಎಂ) ರೈತರಿಗೆ ಕಡ್ಡಾಯವಾಗಿ ನೀಡಲು ಸೂಚನೆ ನೀಡಲಾಗಿದೆ.
ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ಚೀಲದ ಮೇಲೆ ಮುದ್ರಿತ ದರವನ್ನು ಗಮನಿಸಿ ಖರೀದಿಸಬೇಕು ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಿ ರಸಗೊಬ್ಬರ ಖರೀದಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಕಛೇರಿ ಸಂಪರ್ಕಿಸಿ ದೂರು ನೀಡಬಹುದು. ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು / ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ರವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



