ದಾವಣಗೆರೆ: ಬೇಡ ಜಂಗಮ ಹೆಸರಲ್ಲಿವನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಅವರ ಸಹೋದರ ದ್ವಾರಕನಾಥ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧನ ಮಾಡದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಪರಿಶಿಷ್ಟ ಜಾತಿ ಘಟಕದ ಎಫ್. ಹೆಚ್. ಜಕ್ಕಪ್ಪ ಎಚ್ಚರಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಖ್ಯೆಯಲ್ಲಿ ಸಾವಿರಾರು ಜನ ಬೇಡ ಜಂಗಮರು ಪರಿಶಿಷ್ಟ ಜಾತಿ ಅಡಿಯಲ್ಲಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ರೀತಿ ಸುಳ್ಳು ಪ್ರಮಾಣ ಪತ್ರ ಪಡೆದು ರಾಜಕೀಯ ಮತ್ತು ಉದ್ಯೋಗದಲ್ಲಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಪರಿಶಿಷ್ಟರ ಸವಲತ್ತುಗಳನ್ನು ಬೇಡ ಜಂಗಮರ ಹೆಸರಿನಲ್ಲಿ ಕಬಳಿಸುತ್ತಿದ್ದು, ಇದು ಬಸವಣ್ಣನವರಿಗೆ ಮಾಡಿದ ಅನ್ಯಾಯವಾಗಿದೆ. ಈ ಬಗ್ಗೆ ಸರ್ಕಾರ ಈ ಕೂಡಲೇ ತನಿಖೆಗೆ ಆದೇಶಿಸಬೇಕು. ತನಿಖೆಗೆ ಆದೇಶ ಮಾಡುವ ಮೂಲಕ ಎಂ ಪಿ ರೇಣುಕಾಚಾರ್ಯ ಮತ್ತು ಅವರ ಸಹೋದರ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದ ಹಾಲಿ ಸಂಸದ ಜಯ ಸಿದ್ಧೇಶ್ವರ ಶ್ರೀಗಳನ್ನು ಬಂಧನ ಮಾಡಿದರೆ ಇತರರಿಗೆ ಈ ಪ್ರಮಾಣ ಪತ್ರ ಪಡೆಯಲು ಭಯ ಉಂಟಾಗುತ್ತದೆ ಎಂದು ಹೇಳಿದರು.
ಈ ರೀತಿ ಸುಳ್ಳು ಪ್ರಮಾಣ ಪತ್ರಗಳನ್ನು ವಿತರಿಸಿದ ತಹಶೀಲ್ದಾರ್, ವಿಲೇಜ್ ಅಕೌಂಟೆಂಟ್ ಹಾಗೂ ಕಂದಾಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಅವರನ್ನು ಕೆಲಸದಿಂದ ವಜಾ ಮಾಡುವ ಮೂಲಕ ಯಾವುದೇ ಸರ್ಕಾರಿ ಸವಲತ್ತುಗಳು ನೀಡಬಾರದು ಅಲ್ಲದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಅಪರಾಧ. ಕಾನೂನು ಅಡಿಯಲ್ಲಿ ಇಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ, ಶಿಕ್ಷೆಗೆ ಒಳಪಡಿಸಬೇಕು ಒಂದು ವೇಳೆ ರೇಣುಕಾಚಾರ್ಯ ಅವರಿಗೆ ನೈತಿಕತೆ ಇದ್ದರೆ ಈ ಕೂಡಲೇ ತಮ್ಮ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಪರಿಶಿಷ್ಟ ಘಟಕದ ಅಧ್ಯಕ್ಷ ಬಿ ಎಚ್ ವೀರಭದ್ರಪ್ಪ, ನಾಗರಾಜ್ ನಾಯ್ಕ, ಈಶ್ವರ, ರಾಮಯ್ಯ, ತಮ್ಮಣ್ಣ, ಎಸ್ ಶೇಖರಪ್ಪ ರಾಕೇಶ್ ಇದ್ದರು.