ದಾವಣಗೆರೆ: ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಾ. 21 ಮತ್ತು 22 ರಂದು ಜಿಲ್ಲಾ ಕ್ರೀಡಾಂಗಣ ಸೇರಿ ಇತರೆಡೆ ನಡೆಯಲಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸರ್ಕಾರಿ ನೌಕರರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವರು. ಪ್ರತಿ ವರ್ಷದಂತೆ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ನಡೆಸಲಾಗಿದೆ. ನೌಕರರ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕ್ರೀಡಾಕೂಟ ನಡೆಸಲಾಗುತ್ತದೆ. ಆಸಕ್ತರು ಮಾ. 15 ರ ಸಂಜೆ ಒಳಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರು ನೋಂದಾಯಿಸಬೇಕು ಎಂದರು.
ಮಾ. 21 ರ ಬೆಳಗ್ಗೆ 10.30 ಕ್ಕೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್, ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು. ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಸಂಜೆ ಮಳೆಯ ಕಾರಣ ಪೂರ್ಣ ಪ್ರಮಾಣದಲ್ಲಿ ಪಡೆಯಲಿಲ್ಲ. ಹಾಗಾಗಿ ಉದ್ಘಾಟನಾ ಸಮಾರಂಭದ ಸಂಜೆ ಸಂಗೀತ ಸಂಜೆ ನಡೆಸಲಾಗುತ್ತದೆ. ಕಿರುತೆರೆ ಕಲಾವಿದರು, ಹಾಸ್ಯ ಪ್ರಸ್ತುತಿಗಾರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದರಿಂದ ಒಂದೂವರೆ ಸಾವಿರ ನೌಕರರು ನೋಂದಣಿ ಮಾಡಿಕೊಳ್ಳುವರು. ಎಲ್ಲರೂ ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.
ಒಬ್ಬರು ಮೂರು ವೈಯಕ್ತಿಕ ಹಾಗೂ ಒಂದು ಗುಂಪು ಕ್ರೀಡೆಯಲ್ಲಿ ಭಾಗವಹಿಸಬಹುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದೇ ಮಾನದಂಡ ಇದೆ ಎಂದರು.ವಾಲಿಬಾಲ್, ಫುಟ್ಬಾಲ್, ಹಾಕಿ, ಕಬಡ್ಡಿ, ಟೇಬಲ್ ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್, ಬಾಸ್ಕೆಟ್‌ಬಾಲ್, ಚೆಸ್, ಥ್ರೋಬಾಲ್ ಕ್ರೀಡೆಗಳು ನಡೆಯಲಿವೆ. ಸಾಂಸ್ಕೃತಿಕ ವಿಭಾಗದಲ್ಲಿ ಹಿಂದೂಸ್ಥಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಕಥಕ್, ಮಣಿಪುರಿ, ಭರತನಾಟ್ಯ ಇತರೆ ಸ್ಪರ್ಧೆ ನಡೆಯಲಿವೆ ಎಂದು ತಿಳಿಸಿದರು.