ದಾವಣಗೆರೆ: ಪ್ರತಿ ಗ್ರಾಮದಲ್ಲಿ ಮಕ್ಕಳ ಗ್ರಾಮಸಭೆ ಕಡ್ಡಾಯವಾಗಿ ಮಾಡಬೇಕು, ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಬ್ರೆಡ್ಸ್ ಸಂಸ್ಥೆ, ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್ ಸಹಯೋಗದೊಂದಿಗೆ ಜಿಲ್ಲಾ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಡ್ವೋಕಸಿ ಕಾರ್ಯಾಗಾರ ಉಧ್ಘಾಟಿಸಿ ಮಾತನಾಡಿದರು.
ಮಕ್ಕಳ ಗ್ರಾಮ ಸಭೆ ಮಾಡುವುದರಿಂದ ಒತ್ತಡ, ಬಾಲ ಕಾರ್ಮಿಕ ಪದ್ದತಿ, ಬಾಲ್ಯವಿವಾಹದಂತಹ ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ಮಕ್ಕಳ ಅನುಕೂಲಗಳ ಬಗ್ಗೆ ಚರ್ಚೆಯಾಗಬೇಕು ಹಾಗೂ ಮಕ್ಕಳ ಹಕ್ಕುಗಳು ಯಾವ ರೀತಿಯಲ್ಲಿ ಉಲ್ಲಂಘನೆಯಾಗುತ್ತವೆ ಎಂಬುದನ್ನು ಚರ್ಚೆ ಮಾಡಿ ಕ್ರಮ ಕೈಗೊಳ್ಳಲು ಸೂಕ್ತ ವೇದಿಕೆ ಕಲ್ಪಿಸಬೇಕು ಮತ್ತು ಮಕ್ಕಳ ಹಕ್ಕುಗಳ ಸಂಘಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತೇಜಿಸಲು ಡಿಡಿಪಿಐ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಮಾತನಾಡಿ, ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆಗಾಗಿ ಮಹಾನಗರ ಪಾಲಿಕೆ ಬದ್ದವಾಗಿದ್ದು, ಪಾಲಿಕೆಯ ವ್ಯಾಪ್ತಿಗೆ ಬರುವ ಎಲ್ಲಾ ಶಾಲಾ-ಕಾಲೇಜುಗಳ ಬಳಿ ರಸ್ತೆ ತಡೆಯನ್ನು ಹಾಕಿ ನಾಮಫಲಕಗಳನ್ನು ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ರೈಲ್ವೆ ಪೊಲೀಸ್ ಅಧಿಕಾರಿ ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಮನೆ ಬಿಟ್ಟು ಓಡಿಹೋಗುತ್ತಿದ್ದ ಸುಮಾರು 800 ಮಕ್ಕಳನ್ನು ರೈಲು ನಿಲ್ದಾಣದಲ್ಲಿ ಪತ್ತೆಹಚ್ಚಿ, ಅವರಿಗೆ ಕೌನ್ಸಲಿಂಗ್ ನಡೆಸಿ ಅವರನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಮ್ ಮಾತನಾಡಿ, ಇತ್ತೀಚೆಗೆ ಮಕ್ಕಳು ಮನೆ ಬಿಟ್ಟು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಿ, ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಬೆಳೆಯಲು ಬಿಡಬೇಕು. ಶಿಕ್ಷಕರು ಮಕ್ಕಳಲ್ಲಿರುವ ವಿಶೇಷ ಆಸಕ್ತಿ ಗುರುತಿಸಿ ಪೋಷಕರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಈ ಮೊದಲು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನಗೆ ಈ ಹುದ್ದೆ ದೊರಕಿದ ಮೇಲೆ ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಒಳ್ಳೆಯ ಅವಕಾಶ ದೊರೆತಿದೆ. ಇಂದಿಗೂ ಅನೇಕ ಮಕ್ಕಳು ಸಂಕಷ್ಠದಲ್ಲಿದ್ದಾರೆ ಅವರನ್ನು ಗುರುತಿಸಿ ಸಹಾಯ ಮಾಡುವ ಅಭಿಲಾಶೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಸ್ನೇಹಿ ಅಧಿಕಾರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೌಸರ್ ರೇಷ್ಮಾ, ಅಲ್ಪ ಸಂಖ್ಯಾತರ ಇಲಾಖೆಯ ಅಧಿಕಾರಿ ಬಿದರಿ, ಪರಿಶಿಷ್ಠ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ನಾಯ್ಕ. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜ್ಯ ವಕೀಲರ ಸಂಘದ ಸದಸ್ಯರಾದ ಅರುಣ್ ಕುಮಾರ್ ಎಲ್.ಹೆಚ್, ಬ್ರೆಡ್ಸ್ ಸಂಸ್ಥೆ, ಕ್ರೀಮ್ ಯೋಜನೆ ಕಾರ್ಯಕಾರಿ ನಿರ್ದೇಶಕ ಫಾ. ಜಾಯ್ ನೆಡುಂಪರಂಬಿಲ್, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



