ದಾವಣಗೆರೆ: ಏಪ್ರಿಲ್ ವೇಳೆಗೆ ನಗರದ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆಗೆ ಸಿದ್ಧಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಗಡುವು ನೀಡಿದ್ದಾರೆ.
ಖಾಸಗಿ ಬಸ್ ನಿಲ್ಲಾಣ ಕಾಮಗಾರಿ ಪ್ರಗತಿ ಪರಿಶೀಲನೆ ನಂತರ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ವತಿಯಿಂದ 2019 ರಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿತ್ತು. 2021ಕ್ಕೆ ಕಾಮಗಾರಿ ಮುಗಿಸಬೇಕಿತ್ತು. ಆದರೆ, 2022 ಬಂದರೂ ಕಾಮಗಾರಿ ಮುಗಿದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇನ್ನು ಬಹಳ ಕೆಲಸ ಬಾಕಿ ಉಳಿದಿದೆ. ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಟ್ಟು ಏಪ್ರಿಲ್ ವೇಳೆಗೆ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆಗೆ ಸಿದ್ಧಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
15ರಿಂದ 20 ಬಸ್ ನಿಲ್ಲಲು ವ್ಯವಸ್ಥೆ, ವ್ಯಾಪಾರ ಮಳಿಗೆಗಳು, ಕ್ಯಾಂಟೀನ್, ರೆಸ್ಟ್ ರೂಮ್ ವಿವಿಧ ಸೌಕರ್ಯವನ್ನು ನೂತನ ಬಸ್ ನಿಲ್ದಾಣ ಹೊಂದಿದೆ. ಇಲ್ಲಿನ ಮಳಿಗೆಗಳನ್ನು ಪಾಲಿಕೆ ಮೂಲಕ ಟೆಂಡರ್ ಕರೆದು ಯಾರು ಹೆಚ್ಚು ಬಿಡ್ ಮಾಡುತ್ತಾರೋ ಅವರಿಗೆ ನೀಡಲಾಗುವುದು. ಸಬ್ ಟೆಂಡರ್ ನೀಡುವವರಿಗೆ ಯಾವುದೇ ಕಾರಣಕ್ಕೂ ಮಳಿಗೆ ನೀಡಬಾರದು ಎಂದು ಅಧಿಕಾರಿಗೆ ಸೂಚನೆ ನೀಡಿದ್ಧೇನೆ ಎಂದು ಹೇಳಿದರು.



