ದಾವಣಗೆರೆ: ಜಿಲ್ಲೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಚೇರಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು ಸಂಸದ ಜಿ.ಎ.ಸಿದ್ದೇಶ್ವರ್ ಹೇಳಿದ್ದಾರೆ.
ಪ್ರತ್ಯೇಕ ಕಚೇರಿ ಆರಂಭದಿಂದ ಜಿಲ್ಲೆಯ ಜನತೆ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗೆ ಅಲೆದಾಡುವುದು ತಪ್ಪಲಿದೆ. ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಚೇರಿ ಆರಂಭದಿಂದ ಜಿಲ್ಲೆಯ ಆರು ತಾಲೂಕುಗಳು ದಾವಣಗೆರೆ ಜಿಲ್ಲೆ ವ್ಯಾಪ್ತಿಗೆ ಬರಲಿದೆ. ಈ ಮುಂಚೆ ಚನ್ನಗಿರಿ, ನ್ಯಾಮತಿ, ಹೊನ್ನಾಳಿ ತಾಲೂಕುಗಳು ಶಿವಮೊಗ್ಗ ಅಂಚೆ ಅಧೀಕ್ಷಕರ ಕಚೇರಿ ವ್ಯಾಪ್ತಿಗೆ, ದಾವಣಗೆರೆ, ಹರಿಹರ, ಜಗಳೂರು ತಾಲೂಕುಗಳು ಚಿತ್ರದುರ್ಗ ಅಂಚೆ ಅಧೀಕ್ಷಕರ ಕಚೇರಿ ವ್ಯಾಪ್ತಿಗೆ ಇದ್ದವು.
ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆ ಬೇರ್ಪಟ್ಟ ನಂತರ ಜಿಲ್ಲೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಚೇರಿ ಆರಂಭಿಸುವಂತೆ ಸಂಸದ ಸಿದ್ದೇಶ್ವರ್ ಮನವಿ ಮಾಡಿದ್ದರು. ಈಗ ಕಚೇರಿ ಆರಂಭಕ್ಕೆ ಅನುಮೋದನೆ ನೀಡಿರುವುದರಿಂದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಸಿದ್ದೇಶ್ವರ್ ಅಭಿನಂದನೆ ಸಲ್ಲಿಸಿದ್ದಾರೆ.