ದಾವಣಗೆರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮಾರ್ಗಸೂಚಿಯಂತೆ ನ್ಯಾಷನಲ್ ಮೀನ್ಸ್ ಕಂ ಮೆರಿಟ್ ಸ್ಕಾಲರ್‍ಶಿಪ್ (ಎನ್‍ಎಂಎಂಎಸ್) ಪರೀಕ್ಷೆಯನ್ನು ಫೆ.27 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕೆಎಸ್‍ಕ್ಯೂಎಎಸಿ ವತಿಯಿಂದ ನಡೆಸಲು ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪರೀಕ್ಷೆಯನ್ನು ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ವಾರ್ಷಿಕ ವರಮಾನ ರೂ.1,50,000/- ಮೀರದಿರುವ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ. ಪರೀಕ್ಷೆಯ ಆನ್‍ಲೈನ್ ಅರ್ಜಿಯು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ http://sslc.karnataka.gov.in ವೆಬ್‍ಸೈಟ್ ನಲ್ಲಿ ಲಭ್ಯವಿರುತ್ತದೆ. ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳ ಅರ್ಜಿಯನ್ನು ಆನ್‍ಲೈನ್‍ನಲ್ಲಿ ಮಂಡಳಿಯ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಎನ್‍ಎಂಎಂಎಸ್ ಲಾಗಿನ್‍ನಲ್ಲಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನವಾಗಿರುತ್ತದೆ.
ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಮುಖ್ಯ ಶಿಕ್ಷಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ನೋಂದಾಯಿಸುವಂತೆ ಅಗತ್ಯ ಕ್ರಮಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆಎಸ್‍ಕ್ಯೂಎಎಸಿ ಕಚೇರಿ ದೂಸಂ:080-23341615 ಅನ್ನು ಸಂಪರ್ಕಿಸಬಹುದೆಂದು ಡಯಟ್‍ನ ಪ್ರಾಚಾರ್ಯರು ಹಾಗೂ ಪದನಿಮಿತ್ತ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



