ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯ ಮಧ್ಯಭಾಗದಲ್ಲಿ ಎರಡು ಮೊಸಳೆಗಳು ಪತ್ತೆಯಾಗಿದ್ದು, ಇಲ್ಲಿನ ಸುತ್ತಮುತ್ತಲು ಗ್ರಾಮದ ಜನರಲ್ಲಿ ಆತಂಕ ಉಂಟು ಮಾಡಿದ್ದು, ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಗ್ರಾಮದಲ್ಲಿ ಹರಿಯುತ್ತಿರುವ ನದಿಯಲ್ಲಿ ಎರಡು ಮೊಸಳೆ ಪ್ರತ್ಯಕ್ಷವಾಗಿರುವ ಬಗ್ಗೆ ಗ್ರಾಮಾಡಳಿತ ಅರಣ್ಯ ಇಲಾಖೆಗೆ ಮಾಹಿತಿ ನೀಡಿತ್ತು. ಈ ಬಗ್ಗೆ ಹೊನ್ನಾಳಿ ಉಪವಲಯ ಅರಣ್ಯಾಧಿಕಾರಿ ಎಚ್. ಕೃಷ್ಣಮೂರ್ತಿ ಮತ್ತು ಸಿಬ್ಬಂದಿ ಚಂದ್ರಪ್ಪ, ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಮೊಸಳೆಯ ಚಲನವಲನದ ಬಗ್ಗೆ ನಿಗಾವಹಿಸಿದ್ದರು.ಮೊಸಳೆಗಳನ್ನು ಸೆರೆಹಿಡಿಯುವ ತನಕ ನದಿಪಾತ್ರದ ಜನರು, ಮೀನು ಹಿಡಿಯುವವರು ಮತ್ತು ಸಾರ್ವಜನಿಕರು ನದಿಗೆ ಇಳಿಯಬಾರದು ಎಂದು ಅರಣ್ಯಾಧಿಕಾರಿ ಎಚ್. ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ.



