ದಾವಣಗೆರೆ: ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವಿವಿಧ ಬಗೆಯ ಮಾಲ್‍ಗಳು, ಕಾರ್ಖಾನೆ ಸೇರಿದಂತೆ ವಿವಿಧೆಡೆ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳ ಸಮೀಕ್ಷೆಗೆ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು ಹೇಳಿದರು.ಹೇಳಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು 2013 ರಲ್ಲಿಯೇ ಸಂಪೂರ್ಣ ನಿಷೇಧಿಸಲಾಗಿದ್ದರೂ, ರಾಜ್ಯದಲ್ಲಿ ಇನ್ನೂ ಅಲ್ಲಲ್ಲಿ ನಡೆಯುತ್ತಿರುವುದು ದುರ್ದೈವ. ರಾಜ್ಯದಲ್ಲಿ ಒಟ್ಟು 5080 ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಗುರುತಿಸಲಾಗಿದ್ದು, ನಿಯಮಾನುಸಾರ ಇವರಿಗೆ ಪರಿಹಾರ ಹಾಗೂ ಪುನರ್ವಸತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಸರ್ವೆ ಕಾರ್ಯ ರಾಜ್ಯದ 12 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಇನ್ನೂ 18 ಜಿಲ್ಲೆಗಳಲ್ಲಿ ಆಗಬೇಕಿದೆ. ಪಂಚಾಯತಿಗಳಲ್ಲಿ, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಮುಂತಾದೆಡೆ ಕೆಲಸ ಮಾಡುತ್ತಿರುವವರ ನಿಖರ ಸಂಖ್ಯೆ ಇದೆ. ಆದರೆ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು, ವಿವಿಧ ಮಾಲ್‍ಗಳು, ಕಾರ್ಖಾನೆ ಸೇರಿದಂತೆ ಹಲವೆಡೆ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್‍ಗಳ ಮಾಹಿತಿ ಇಲ್ಲ. ಹೀಗಾಗಿ ಇಂತಹವರಿಗೆ ಸರ್ಕಾರದ ಸೌಲಭ್ಯ ಇನ್ನೂ ದೊರಕಿಲ್ಲ. ಶೀಘ್ರದಲ್ಲಿಯೇ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಮೈಸೂರು, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸರ್ವೆ ನಡೆಸಿ, ವರದಿ ಸಲ್ಲಿಸುವ ಕಾರ್ಯವನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಅವರಿಗೆ ವಹಿಸಲಾಗಿದೆ. ಈ ವರದಿಯ ಬಳಿಕ ಇಡೀ ರಾಜ್ಯದಲ್ಲಿ ಸರ್ವೆ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಆಯೋಗದ ಅಧ್ಯಕ್ಷರು ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಶೀಘ್ರ ಸಮಸ್ಯೆಗಳ ಪರಿಹಾರದ ಆಶ್ವಾಸನೆ ನೀಡಿದರು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಸ್. ಶಂಕರ್, ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ವಸತಿ ಸೌಲಭ್ಯ ನೀಡಬೇಕು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಸಾಲ ಸೌಲಭ್ಯ, ಪಶುಸಂಗೋಪನೆ ಇಲಾಖೆಯಲ್ಲಿ ಗ್ರೂಪ್ ಡಿ ಮತ್ತು ಗ್ರೂಪ್ ಸಿ ಹುದ್ದೆಗಳನ್ನು ನೀಡಬೇಕು, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 15-20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಫಾಯಿ ಕರ್ಮಚಾರಿಗಳಿಗೆ ಖಾಯಂ ಗೊಳಿಸಬೇಕು, ದಾವಣಗೆರೆ ವಿವಿ ಗೆ ಡಾ. ಬಿ.ಆರ್. ಅಂಬೇಡ್ಕರ್ ವಿವಿ ಎಂದು ನಾಮಕರಣ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು. ಸಾಗರ್ ಅವರು, ಸಫಾಯಿಕರ್ಮಚಾರಿಗಳು ಹೆಚ್ಚು ವಾಸವಿರುವ ಗಾಂಧಿನಗರದಲ್ಲಿ ಜಿಮ್ ಪಾರ್ಕ್ ಹಾಗೂ ಗ್ರಂಥಾಲಯ ನಿರ್ಮಾಣವಾಗಬೇಕು, ಪೌರಕಾರ್ಮಿಕರಿಗಾಗಿ ನಗರಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ವಿಶ್ರಾಂತಿಗೃಹ ನಿರ್ಮಾಣವಾಗಬೇಕು ಎಂದರು.
ಪೌರ ಕಾರ್ಮಿಕರ ಮುಖಂಡ ಹನುಮಂತಪ್ಪ ಮಾತನಾಡಿ, ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯ ಶೀಘ್ರ ದೊರೆಯಬೇಕು, ವಿನಾಕಾರಣ ವಿಳಂಬ ಮಾಡುವುದು ಸರಿಯಲ್ಲ ಎಂದರು. ಬಾಬಣ್ಣ ಅವರು, ಗ್ರಾಮೀಣ ಪ್ರದೇಶಗಳಲ್ಲೂ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳು ಇದ್ದು, ಈ ಬಗ್ಗೆ ಸಮೀಕ್ಷೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ರಿಷ್ಯಂತ್ ಸಿ.ಬಿ., ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರಮಾ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಣೆಪ್ಪ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಾಗೃತ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.