ದಾವಣಗೆರೆ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆ.14 ರಂದು ನಗರದ ಎಂ.ಸಿ.ಸಿ “ಬಿ” ಬ್ಲಾಕ್‍ನ ಬಾಪೂಜಿ ಸ್ಕೂಲ್ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಹಿರಿಯ ನಾಗರಿಕರ ಸಂಘ, ದಾವಣಗೆರೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ, ಬಾಪೂಜಿ ವಿದ್ಯಾ ಸಂಸ್ಥೆ, ದಾವಣಗೆರೆ ಹಾಗೂ ಹಿರಿಯ ನಾಗರಿಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್.ಮ.ಕರೆಣ್ಣವರ ಉದ್ಘಾಟಿಸುವರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರು ಹಾಗೂ ದಾ.ಜಿ.ಹಿ.ನಾ.ಸಂಘದ ಅಧ್ಯಕ್ಷರಾದ ಎಸ್ ಗುರುಮೂರ್ತಿ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ.ವೀರಯ್ಯ, ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಲ್.ಹೆಚ್ ಅರುಣಕುಮಾರ್ ಭಾಗವಹಿಸುವರು.