ಹರಿಹರ: ಭದ್ರಾ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿರುವುದರಿಂದ ಜನರು ತುಂಗಭದ್ರಾ ನದಿಪಾತ್ರಕ್ಕೆ ತೆರಳದಂತೆ ತಾಲ್ಲೂಕು ಆಡಳಿತ ಎಚ್ಚರಿಸಿದ್ದು, ನದಿ ಪಾತ್ರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳದಿಂದ ನದಿ ಪಾತ್ರದ ದಡದ ಜಮೀನುಗಳಿಗೆ ನೀರು ನುಗ್ಗಿದೆ. ಹರಿಹರದ ಗಂಗಾನಗರ, ರಾಘವೇಂದ್ರ ಮಠ ಹಿಂಭಾಗದ ತುಂಗಭದ್ರಾರತಿ ಮಂಟಪದ ಮೆಟ್ಟಿಲುಗಳು ಜಲಾವೃತವಾಗಿವೆ.
ನಿಷೇಧಾಜ್ಞೆ ಜಾರಿ
ತಾಲ್ಲೂಕಿನ ಉಕ್ಕಡಗಾತ್ರಿ,ಗೋವಿನಹಾಳು, ಇಂಗಳಗೊಂದಿ, ಎಳೆಹೊಳೆ, ಮಳಲಹಳ್ಳಿ, ನಂದಿಗುಡಿ, ಪಾಳ್ಯ, ನಂದಿಗಾವಿ, ಬಿಳಸನೂರು, ಹುಲಗಿನಹೊಳೆ, ರಾಜನಹಳ್ಳಿ, ಹಲಸಬಾಳು, ತಿಮ್ಮಾಪುರ, ಗುತ್ತೂರು,ದೀಟೂರು, ಪಾಮೇನಹಳ್ಳಿ, ಚಿಕ್ಕಬಿದರಿ ಗ್ರಾಮಗಳ ನದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನದಿಯಲ್ಲಿ ಈಜಾಡುವುದು, ಬಟ್ಟೆ ಒಗೆಯುವುದು, ವಾಹನ, ದನಕರುಗಳನ್ನು ತೊಳೆಯುವುದು, ದನಕರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.



