ದಾವಣಗೆರೆ: ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವನೆಯೇ ಮಾರ್ಗ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಜಗಳೂರು ತಾಲ್ಲೂಕು ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಹಮ್ಮಿಕೊಂಡ ಉತ್ತಮ ಆರೋಗ್ಯಕ್ಕಾಗಿ ತೋಟಗಾರಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಭೂಮಾಲಿನ್ಯ ಹಾಗೂ ನೀರು ಮಾಲಿನ್ಯದಿಂದಾಗಿ ನಾವು ಊಟ ಮಾಡುವ ಆಹಾರವು ವಿಷಪೂರಿತವಾಗಿದೆ. ಹಾಗಾಗಿ ಇಂದಿನ ಜನತೆಯಲ್ಲಿ ನಿರೋಧಕ ಶಕ್ತಿ ಕುಂದುತ್ತಿದ್ದು, ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ಕೇಂದ್ರದವತಿಯಿಂದ ಬೀಟಾ ಕೆರೋಟಿನ್ ಹೆಚ್ಚಿರುವ ಬಳ್ಳಿ ಗೆಣಸಿನ ತಳಿ ಭೂ ಸೋನಾ, ಪೌಷ್ಟಿಕರಿಸಿದ ರಾಗಿ ತಳಿ ಸಿಎಫ್‌ಎಂ.ವಿ-1 ಯನ್ನು ಈ ಭಾಗದಲ್ಲಿ ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್ ರವರು ಮಾತನಾಡಿ, ಮನೆಯಂಗಳದಲ್ಲಿ ಪೌಷ್ಟಿಕ ಕೈತೋಟ ಮಾಡಲು 14 ತಳಿಯ ತರಕಾರಿ ಬೀಜಗಳನ್ನು ನೀಡುತ್ತಿದ್ದು ಸಾವಯವದಲ್ಲಿ ಬೆಳೆದು ಆಹಾರದಲ್ಲಿ ಬಳಸಲು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಎಸ್. ಕೆ. ಮಾತನಾಡಿ, ತರಳಬಾಳು ಕೆವಿಕೆ ವತಿಯಿಂದ ಕೃಷಿ, ಶಿಕ್ಷಣ ಮತ್ತು ಸಮುದಾಯ ಆರೋಗ್ಯ ಕಾರ್ಯಕ್ರಮವನ್ನು ನಮ್ಮ ಭಾಗದಲ್ಲಿ ಹಮ್ಮಿಕೊಂಡಿರುವುದು ನಮ್ಮ ಭಾಗ್ಯವೇ ಸರಿ. ಮುಂದಿನ ದಿನಗಳಲ್ಲಿ ತೋಟಗಾರಿಕೆ ವಿಷಯಗಳ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ನಮ್ಮಭಾಗದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವೈಧ್ಯಾಧಿಕಾರಿ ಡಾ ಬಸವಂತ್ ರವರು ಮಾತನಾಡಿ ಉತ್ತಮ ಆಹಾರ ಮತ್ತು ಜೀವನ ಶೈಲಿಯಿಂದ ರೋಗ ರಹಿತಜೀವನ ನಡೆಸಬಹುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಶ್ರೀ ಹನುಮಂತಪ್ಪ, ಶ್ರೀ ಪ್ರಕಾಶ್, ದ್ಯಾಮನಗೌಡ, ಆಶಾ ಕಾರ್ಯಕರ್ತರು ಭಾಗವಹಿಸಿ ಮಾಹಿತಿ ಪಡೆದರು.



