ದಾವಣಗೆರೆ: ಅಮೃತ ಗ್ರಾಮ ಯೋಜನೆಗೆ ಸೇರ್ಪಡೆಯಾಗದಿರುವ ಕುರ್ಕಿ ಗ್ರಾಮವನ್ನು ಯೋಜನೆಡಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ಹೇಳಿದರು .
ಮಾಯಕೊಂಡ ವಿಧಾನಸಭಾ ವ್ಯಾಪ್ತಿಯ ಹಿರೇತೊಗಲೇರಿ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣ ಹಾಗೂ ಕುರ್ಕಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈ ಗ್ರಾ ಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಸ್ವಚ್ಛತೆಯ ಬಗೆಗೆ ಬಹಳ ಅರಿವಿದ್ದು ತುಂಬಾ ಉತ್ತಮವಾಗಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಿಕೊಂಡಿದ್ದಾರೆ ಅದೇ ರೀತಿ ಕುರ್ಕಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಂಥಾಲಯ ಗ್ರಾಮಸ್ಥರ ವಿಧ್ಯಾಭ್ಯಾಸದ ಕಾಳಜಿಯನ್ನು ತೋರಿಸುತ್ತದೆ ಎಂದರು.
ಗ್ರಾಮದ ಮಹಿಳೆಯರು ಸ್ವ ಸಹಾಯ ಸಂಘಗಳಲ್ಲಿ ಸಕ್ರಿಯವಾಗಿದ್ದು ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಹಾಗೂ ಬಳಸುವ ಮೂಲಕ ಸ್ವಚ್ಛತೆಗೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಗಮನ ಹರಿಸಬೇಕೆಂದರು.
ಈಗಾಗಲೇ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೆ ನಳದ ಮೂಲಕ ನೀರು ಕೊಡಲು ಕಾರ್ಯೋನ್ಮುಖವಾಗಿದ್ದು 2024 ರ ವೇಳೆಗೆ ಪ್ರತಿ ಮನೆಯೂ ನಲ್ಲಿ ನೀರಿನ ಸಂಪರ್ಕ ಹೊಂದಲಿವೆ. ಅದರಂತೆ ಗ್ರಾಮ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆಯ್ಕೆಯಾಗಿದೆ ಎಂದರು.
ಸಂಸದರಾದ ಜಿ ಎಂ ಸಿದ್ಧೇಶ್ವರ ಮಾತನಾಡಿ ಜಿಲ್ಲೆಯಲ್ಲಿ 356 ಗ್ರಾಮಗಳು ಜಲಜೀವನ್ ಮಿಷನ್ನಡಿ ನೀರು ಪೂರೈಕೆ ಆಗುತ್ತಿದ್ದು ಉಳಿದ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲಾಗುವುದು. ಸ್ವಚ್ಛ ಸಂಕೀರ್ಣ ಘಟಕವನ್ನು ಸರ್ಕಾರದ ಲೆಕ್ಕಕ್ಕಿಂತ ದೊಡ್ಡದಾಗಿ ನಿರ್ಮಿಸಿದ್ದು ಕೆಲಸದ ಬಗೆಗಿನ ನಿಮ್ಮ ಕಾಳಜಿಯನ್ನು ತೋರಿಸುತ್ತದೆ. ಒಣ ತ್ಯಾಜ್ಯ ಘಟಕದೊಂದಿಗೆ ಹಸಿತ್ಯಾಜ್ಯ ಘಟಕವನ್ನು ಮಾಡಿಕೊಳ್ಳುವುದರಿಂದ ರೈತರಿಗೆ ಒಳ್ಳೆಯ ಗೊಬ್ಬರ ದೊರೆಯಲಿದೆ, ಇದರೊಂದಿಗೆ ಮಹಿಳಾ ಸ್ವ ಸಹಾಯ ಸಂಘಗಳು ಸಧೃಡವಾಗುವುದರೊಂದಿಗೆ ಗ್ರಾ.ಪಂ ಗೂ ಆದಾಯ ಬರಲಿದೆ ಎಂದರು,
ಶಾಸಕ ರಾದ ಪ್ರೊ ಲಿಂಗಣ್ಣ ಮಾತನಾಡಿ ಈ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದೆಂದರು.ಜಿಲ್ಲಾ ಪಂಚಾಯತ್ ಸಿಇಓ ವಿಜಯ ಮಹಾಂತೇಶ ಮಾತನಾಡಿ, ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯದ ನರೇಗಾ, ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಗ್ರಾಮೀಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 31 ಲಕ್ಷ ಗುರಿ ಇದ್ದು, 28 ಗುರಿ ಮುಟ್ಟಿದ್ದೇವೆ. ಇದು ವಾರ್ಷಿಕ ಪ್ರತಿಶತ ಶೇ.90 ರಷ್ಟು ಸಾಧನೆಯಾಗಿದೆ. ಮುಂದಿನ ವರ್ಷದಲ್ಲಿ ಈ ಗುರಿಗಿಂತ ಹೆಚ್ಚಿನ ಸಾಧನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿ 2020-21 ರಲ್ಲಿ 356 ಕಾಮಗಾರಿಗಳು ತೆಗೆದುಕೊಂಡಿದ್ದು, 355 ಕಾಮಗಾರಿಗಳಿಗೆ ಆದೇಶ ಕೊಟ್ಟಿದ್ದು ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿದೆ. ಇಲ್ಲಿವರೆಗೂ 62 ಕಾಮಗಾರಿಗಳು ಮುಕ್ತಾಯವಾಗಿದೆ. 21-22 ಸಾಲಿನಲ್ಲಿ 125 ಕಾಮಗಾರಿಗಳು ತೆಗೆದುಕೊಂಡಿದ್ದು, 32 ಕಾಮಗಾರಿಗಳಿಗೆ ಟೆಂಡರ್ ಕರೆದು 7 ಕಾಮಗಾರಿಗೆ ಕೆಲಸ ನಡೆಯುತ್ತಿದೆ. 40 ಡಿಪಿಸ್ ಆಗಬೇಕಿದೆ ಎಂದರು.
ಸ್ವಚ್ಛ ಭಾರತ ಗ್ರಾಮೀಣ ಯೋಜನೆಯ ಅಂಗವಾಗಿ ಜಿಲ್ಲೆಯ 195 ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ ವಿಲೇವಾರಿ ಘಟಕಕ್ಕೆ 153 ಪಂಚಾಯಿತಿಯಲ್ಲಿ ಜಾಗ ಸಿಕ್ಕಿದ್ದು, 67 ಪಂಚಾಯಿತಿಗಳಲ್ಲಿ ಘಟಕ ಪೂರ್ಣಗೊಂಡಿದೆ. 86 ಪಂಚಾಯಿತಿಗಳಲ್ಲಿ ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 42 ಪಂಚಾಯಿತಿಗಳಲ್ಲಿ ಜಾಗ ಸಿಗಬೇಕಿದ್ದು, ಜಾಗ ಮಂಜೂರು ಮಾಡಿಕೊಂಡು ಕಾರ್ಯನಿರ್ವಹಿಸುತ್ತೇವೆ. ಇನ್ನೂ ಮೊದಲನೇ ಹಂತದಲ್ಲಿ 17 ವಾಹನಗಳನ್ನು ಖರೀದಿ ಮಾಡಿದ್ದೇವೆ. ಎರಡನೇ ಹಂತದಲ್ಲಿ 75 ವಾಹನಗಳನ್ನು ಖರೀದಿ ಮಾಡಿದ್ದು, ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕಿಗೆ ಮುಖ್ಯಮಂತ್ರಿ ಆಗಮಿಸಿದ ಸಂದರ್ಭದಲ್ಲಿ 27 ವಾಹನಗಳಿಗೆ ಚಾಲನೆ ನೀಡಲಾಯಿತು. ಉಳಿದ 48 ವಾಹನಗಳಿಗೆ ಚಾಲನೆ ಕೊಟ್ಟಿದ್ದಿರಿ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಶಾಲೆ ಇರದ ಕಾರಣ ಮಕ್ಕಳಿಗೆ ಓದುವ ಹವ್ಯಾಸ ತಪ್ಪುವ ಸಾಧ್ಯತೆ ಇರುವುದರಿಂದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಓದುವ ಬೆಳಕು ಎಂಬ ಕಾರ್ಯಕ್ರಮದಡಿ ಆಯಾ ಗ್ರಾಮಗಳಲ್ಲಿ ಬರುವ ಮಕ್ಕಳನ್ನು ಅಲ್ಲಿಯ ಗ್ರಂಥಾಲಯದಲ್ಲಿ ನೊಂದಾಣಿ ಮಾಡಿಸಲಾಗಿದೆ. ಹಾಗೂ ಎಲ್ಲಾ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.
ಎಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ವಿಶೇಷವಾಗಿ ಕುರ್ಕಿ ಗ್ರಾಮ ಪಂಚಾಯತಿಯನ್ನು 2020-21 ನೇ ಸಾಲಿನ ಗಾಂಧಿ ಪುರಸ್ಕೃತ ಪ್ರಶಸ್ತಿಗೆ ಆಯ್ಕೆ ಮಾಡಿ ರಾಜ್ಯ ಸರ್ಕಾರಕ್ಕೆ ಕಳಿಸಿಕೊಡಲಾಗಿದ್ದು, ಅನುಮೋದನೆಯಾಗಿ ಬರಬೇಕಿದೆ ಎಂದು ಸಿಇಓ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮನೆ ಮನೆಗೆ ಡಸ್ಟ್ ಬಿನ್ ಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ವಿಜಯ ಮಹಾಂತೇಶ ದಾನಮ್ಮನವರ್ ಜಿ.ಪಂ.ಉಪ ಕಾರ್ಯದರ್ಶಿ ಆನಂದ್ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.