ಜಗಳೂರು: ತೋಟಗಾರಿಕೆ ಬೆಳೆಗಳಲ್ಲಿ ಮಣ್ಣು ಪರೀಕ್ಷೆಯ ಆಧಾರದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಮಣ್ಣಿನಲ್ಲಿ ಫಲವತ್ತತೆಯನ್ನು ಕಾಪಾಡಲು ಸಹಾಯವಾಗುತ್ತಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಜಗಳೂರು ತಾಲ್ಲೂಕು ಬಸಪ್ಪನಹಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಉಪಯೋಜನೆಯಡಿ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮದ ಆಯ್ದ ರೈತರ ಮಣ್ಣು ಪರೀಕ್ಷೆಯನ್ನು ನಡೆಸಲಾಗಿದ್ದು, ಮಣ್ಣಿನ ರಸಸಾರ 7.5-8.0 ರಆಸುಪಾಸಿನಲ್ಲಿದ್ದು, ಲವಣಾಂಶಗಳ ಅಂಶವೂ ಉತ್ತಮವಾಗಿದೆ. ಸಾರಜನಕ ಮತ್ತು ರಂಜಕದ ಅಂಶ ಮಧ್ಯಮವಾಗಿದ್ದು, ಭೂಮಿಯಲ್ಲಿ ಪೊಟ್ಯಾಷ್ ಅಂಶ ಕಡಿಮೆಯಿದೆ. ರೈತರು ಪ್ರತೀ ವರ್ಷ ಎಕರೆಗೆ 3 ಕ್ವಿಂಟಾಲ್ ಜಿಪ್ಸಂ, 12 ಟನ್ ಕೊಟ್ಟಿಗೆ ಗೊಬ್ಬರ ನೀಡಬೇಕೆಂದರು.
ಹಸಿರೆಲೆಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚಳ
ಹಸಿರೆಲೆಗೊಬ್ಬರದ ಬೆಳೆಗಳಾದ ಸೆಣಬು, ಡಯಾಂಚ ಮತ್ತು ವೆಲ್‌ವೆಟ್ ಬೀನ್ಸ್‌ಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ
ಹೆಚ್ಚುವುದು ಎಂದು ತಿಳಿಸಿದರು.
ಕೇಂದ್ರದವತಿಯಿಂದ ಮೆಣಸಿನಕಾಯಿ ಮತ್ತು ಅಲಸಂದೆ ಬೆಳೆಗಳಲ್ಲಿನ ಮುಂಚೂಣಿ ಪ್ರಾತ್ಯಕ್ಷಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಒಳಸುರಿಗಳನ್ನು ನೀಡಲಾಯಿತು.
ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಓ ಮೆಕ್ಕೆಜೋಳದಲ್ಲಿ ಮುಳ್ಳು ಸಜ್ಜೆ ನಿವಾರಣೆ ಕುರಿತು ಮಾಹಿತಿ
ನೀಡಿದರು. ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಅವಿನಾಶ್ ಟಿ.ಜಿ. ರವರು ಮೆಕ್ಕೆಜೋಳದಲ್ಲಿ ಲದ್ದಿ ಹುಳುವಿನ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಕೃಷ್ಣಮೂರ್ತಿ, ಶಶಿಧರ, ಬಡಯ್ಯ, ತಿಪ್ಪೇಸ್ವಾಮಿ, ಗುರುಮೂರ್ತಿ ಮತ್ತು ಶಿವಣ್ಣ ಇತರರು ಹಾಜರಿದ್ದರು.