ದಾವಣಗೆರೆ: ಅಸ್ಸಾಂ ರಾಜ್ಯದ ಗುಹಾಹಟಿಯಲ್ಲಿ ನಡೆದ 6ನೇ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ನ ಮೋಯ್ ಥೈ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಹಳೇ ಕುಂದುವಾಡದ ಜಗದೀಶ್ ಚಿನ್ನದ ಪದಕ ಪಡೆದಿದ್ದು, ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಸ್ಸಾಂನ ಗ್ಲೋಬಲ್ ಇಂಟರನ್ಯಾಷನಲ್ ಮಾರ್ಷಲ್ ಆರ್ಟ್ಸ್ ಫೆಡರೇಷನ್ ನಿಂದ ನಡೆದ ಫೈನಲ್ ಸ್ಪರ್ಧೆಯಲ್ಲಿ 58ಕೆಜಿ ವಿಭಾಗದಲ್ಲಿ ಕರ್ನಾಟಕ ರಾಜ್ಯದಿಂದ ಜಗದೀಶ್ ಹಾಗೂ ಮೇಘಾಲಯ ರಾಜ್ಯದ ಯುವಕನ ನಡುವೆ ಸ್ಪರ್ಧೆ ನಡೆದಿದೆ. ಅತ್ಯುತ್ತಮ ಕಿಕ್ ಮೂಲಕ ಜಗದೀಶ್ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಫೆಬ್ರುವರಿ 25ರಂದು ಇಂಡೋನೇಷಿಯಾ ದೇಶದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಮೋಯ್ ಥೈ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ದಾವಣಗೆರೆ ನಗರದ ಹಳೇ ಕುಂದುವಾಡದ ನಿವಾಸಿಯಾಗಿರುವ ಶಿವಪ್ಪ, ಗಂಗಮ್ಮ ದಂಪತಿಯ ಪುತ್ರನಾಗಿರುವ ಜಗದೀಶ್ ಬಡತನದಲ್ಲಿ ಅರಳಿದ ಪ್ರತಿಭೆಯಾಗಿದ್ದು, ತಂದೆ ತಾಯಿ ಇಬ್ಬರು ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ, ಈ ಮಧ್ಯೆ ಏನಾದರು ಸಾಧನೆ ಮಾಡಬೇಕು ಎಂದು ಪಣತೊಟ್ಟ ಜಗದೀಶ್ ದಾವಣಗೆರೆಯ ಈಗಲ್ ಫಿಟ್ನೆಸ್ ನಲ್ಲಿ ವೆಂಕಿ ಸೆನ್ಸೈ ಅವರ ಬಳಿ ತರಬೇತಿ ಪಡೆದು ಸತತ ಪ್ರಯತ್ನಗಳಿಂದ ಕರಾಟೆ, ಕಿಕ್ ಬಾಕ್ಸಿಂಗ್ ನಲ್ಲಿ ಹೆಸರು ಗಳಿಸಿದ್ದಾನೆ. ಇನ್ನೂ ಚಿನ್ನ ಗೆದ್ದ ಜಗದೀಶ್ ಗೆ ತರಬೇತುದಾರ ವೆಂಕಿ ಸೆನ್ಸೈ ಹಾಗೂ ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲೂ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.



