ದಾವಣಗೆರೆ: ‘ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ದಿಗೆ ಮಾರಕ’ ವಿಷಯ ಕುರಿತು ಸ್ವಾಭಿಮಾನಿ ಬಳಗದಿಂದ ಯುವ ಸಮುದಾಯಕ್ಕೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಪ್ರಥಮ ಬಹುಮಾನ 20 ಸಾವಿರ ಆಗಿದ್ದು, ಡಿಸೆಂಬರ್ 20ರೊಳಗೆ ಪ್ರಬಂಧ ಸಲ್ಲಿಸಬೇಕು ಎಂದು ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವ ಸಮೂಹ ಮತ್ತು ಜನರಲ್ಲಿ ಸಾಹಿತ್ಯ ಹಾಗೂ ಓದುವ ಸಂಸ್ಕೃತಿ ಬೆಳೆಸುವ ಸಲುವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ದಿಗೆ ಮಾರಕ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ ಎಂದರು.
ಕೈ ಬರಹದಲ್ಲೇ ಪ್ರಬಂಧ ಬರೆಯಬೇಕು: ಪ್ರಸ್ತುತ ಕುಟುಂಬ ರಾಜಕಾರಣ ವಿಜೃಂಭಿಸುತ್ತಿದೆ. ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಈ ಅಭಿಯಾನ ಆಯೋಜಿಸಲಾಗಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧೆ ಇದ್ದು, ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ದಿಗೆ ಮಾರಕ ಎಂಬ ವಿಷಯದ ಕುರಿತು ಸುಮಾರು 500ರಿಂದ 1000 ಪದಗಳ ಕನ್ನಡ ಕೈ ಬರಹದಲ್ಲೇ ಪ್ರಬಂಧ ಬರೆದು ಕಳಿಸಬೇಕು ಎಂದರು.
- ಯಾರೆಲ್ಲಾ ಭಾಗವಹಿಸಬಹುದು..?
- 8ನೇ ತರಗತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು
- ಪದವಿಯಿಂದ ಸ್ನಾತಕೋತ್ತರ ಪದವೀಧರರು
- 25ರಿಂದ 35 ವರ್ಷದೊಳಗಿನ ಗೃಹಿಣಿಯರು,ಸಾರ್ವಜನಿಕರು
ಮೂರು ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಮೂರು ವಿಭಾಗಗಳಲ್ಲಿಯೂ ಪ್ರಥಮ 20 ಸಾವಿರ, ದ್ವಿತೀಯ ಹತ್ತು ಸಾವಿರ, ಹಾಗೂ ತೃತೀಯ 5 ಸಾವಿರ ರೂಪಾಯಿ ನೀಡಿ ಗೌರವಿಸಲಾಗುವುದು. ಐದು ನೂರು ಮಂದಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕ ಕೊಡಮಾಡಲಾಗುವುದು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜನವರಿ ಮೊದಲ ವಾರದಲ್ಲಿ ಬಹುಮಾನ ಪ್ರದಾನ ಮಾಡಲಾಗುವುದು. ಆ ದಿನ ಇದೇ ವಿಷಯ ಕುರಿತು ಚರ್ಚಾ ಸ್ಪರ್ಧೆ ಸಹ ಇದ್ದು, ಅಂದು ಸಹ ವಿಶೇಷ ಬಹುಮಾನ ನೀಡಲಾಗುವುದು.ಸ್ವಾಭಿಮಾನಿ ಬಳಗದ ವತಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿ ವಿನೂತನ ಕಾರ್ಯಕ್ರಮ ನಡೆಸಲಾಗುವುದು.
ಪ್ರಬಂಧ ತಲುಪಿಸುವ ವಿಳಾಸ: ಇನ್ ಸೈಟ್ಸ್ ಐಎಎಸ್ ಆಫೀಸ್, ಫಸ್ಟ್ ಫ್ಲೋರ್,ಜಾಧವ್ ಕಾಂಪ್ಲೆಕ್ಸ್, ರಿಂಗ್ ರೋಡ್, ಜಿಲ್ಲಾಧಿಕಾರಿಗಳ ನಿವಾಸದ ಬಳಿ, ನಿಜಲಿಂಗಪ್ಪ ಬಡಾವಣೆ. ಹೆಚ್ಚಿನ ಮಾಹಿತಿಗೆ 9606388288, 6363682537 ಇಲ್ಲಿಗೆ ಸಂಪರ್ಕಿಸಿ.