ದಾವಣಗೆರೆ: ಟಗರು ಕಾಳಗದಲ್ಲಿ ಸೋಲಿಲ್ಲದ ಸರದಾರ ಖ್ಯಾತಿ ಪಡೆದಿದ್ದ ಬೆಳ್ಳೂಡಿ ಕಾಳಿ ಟಗರು ಅನಾರೋಗ್ಯದಿಂದ ನಿಧನ ಹೊಂದಿದೆ. ಅಪಾರ ಅಭಿಮಾನಿ ಬಳಗ ಹೊಂದಿದ್ದ ಕಾಳಿ, ಸಾವಿರಾರು ಟಗರು ಕಾಳಗ ವೀಕ್ಷಕರ ಪ್ರೀತಿ ಗಳಿಸಿತ್ತು.
ಟಗರು ಕಾಳಗದಲ್ಲಿ ಕಾಳಿ ಸೋತ ಪಂದ್ಯಗಳೇ ಇಲ್ಲ. ಹೀಗಾಗಿ ಇಡೀ ಜಿಲ್ಲೆಯಲಗಲಿ ಬೆಳ್ಳೂಡಿ ಕಾಳಿ ಅಪಾರ ಪ್ರೀತಿ, ಅಭಿಮಾನಿಗಳನ್ನು ಹೊಂದಿತ್ತು. ಆಟ ಕಣ್ತುಂಬಿಕೊಳ್ಳಲು ಗುಂಪು ಗುಂಪಾಗಿ ಅಭಿಮಾನಿಗಳು ಸೇರುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಕಾಳಿ ಸಾಕಷ್ಟು ಹವಾ ಸೃಷ್ಠಿಸಿತ್ತು. ಕಾಳಿ ಕಣಕ್ಕೆ ಪ್ರವೇಶಿಸುತ್ತಿದ್ದಂತೆ ಎದುರಾಳಿಗಳಲ್ಲಿ ನಡುಕ ಉಂಟಾಗುತ್ತಿತ್ತು. ಎದುರಾಳಿ ಟಗರು ಹೊಡೆದುರುಳಿಸಿ ಬಹುಮಾನಗಳ ತನ್ನದಾಗಿಸಿಕೊಳ್ಳುತ್ತಿದ್ದು, ಕಾಳಿಯ ಸಾವು ಅಪಾರ ಅಭಿಮಾನಿಗಳಿಗೆ ನೋವು ತಂದಿದೆ.
ಒಂದು ವಾರದಿಂದ ಅನಾರೋಗ್ಯಕ್ಕೆ ಬಳಲುತ್ತಿದ್ದ ಬೆಳ್ಳೂಡಿ ಕಾಳಿಗೆ ದಾವಣಗೆರೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕಾಳಿಯ ರಕ್ತ ಪರೀಕ್ಷೆಯ ವರದಿ ಸೋಮವಾರ ಬರಬೇಕಾಗಿತ್ತು. ಆದರೆ, ವರದಿ ಬರುವ ಮುನ್ನವೇ ಕಾಳಿ ಮೃತಪಟ್ಟಿದೆ. ಬೆಳ್ಳೂಡಿ ಕಾಳಿ ಇಲ್ಲಿವರೆಗೆ 25ರಿಂದ 30 ಕಾಳಗಗಳಲ್ಲಿ ಭಾಗವಹಿಸಿದ್ದು, ಸೋತೇ ಇಲ್ಲ. ಅಪಾರ ಅಭಿಮಾನಿ ಹೊಂದಿದ್ದ ಕಾಳಿಯನ್ನು ತಮ್ಮ ಜಮೀನಿನಲ್ಲಿಯೇ ಮಣ್ಣು ಮಾಡುವುದಾಗಿ ಟಗರಿನ ಮಾಲೀಕ ರಾಘವೇಂದ್ರ ಮಾಹಿತಿ ನೀಡಿದ್ದಾರೆ.



