ದಾವಣಗೆರೆ: ಇಡೀ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದರೂ, ಈ ಗ್ರಾಮದಲ್ಲಿ ಮಾತ್ರ ಈವರೆಗೆ ಮಳೆಯೇ ಆಗಿಲ್ಲ. ಗ್ರಾಮಸ್ಥರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.
ಮಳೆ ಶುರುವಾಗಿ ಒಂದು ತಿಂಗಳು ಕಳೆದರೂ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಮಳೆ ನಾಪತ್ತೆಯಾಗಿದೆ. ಹೀಗಾಗಿ ಮಳೆಗಾಗಿ ರೈತರು ಕಂತೆ ಭಿಕ್ಷೆ ಎತ್ತುತ್ತಿದ್ದಾರೆ. ಎಲ್ಲ ಕಡೆ ಮಳೆಯಾದರೂ, ತಮ್ಮ ಊರಲ್ಲಿ ಮಾತ್ರ ಮಳೆ ಆಗದಕ್ಕೆ ಜನರಲ್ಲಿ ಆತಂಕ ಶುರುವಾಗಿದೆ. ಇದೀಗ ಮುನಿಸಿಕೊಂಡಿರುವ ವರುಣ ದೇವನಿಗಾಗಿ ಕಂತೆ ಭಿಕ್ಷೆ ಎತ್ತಿ ಪ್ರಸಾದ ಸೇವೆ ಮಾಡುತ್ತಿದ್ದಾರೆ.
ಮಳೆ ಬಾರದೆ ಇದ್ದಾಗ ಪೂರ್ವಜರ ಕಾಲದಿಂದಲೂ ಕಂತೆ ಭಿಕ್ಷೆ ಎತ್ತಿ ಊರಿನ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ನೆರೆವೇರಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮಳೆ ಬರುತ್ತಿದ್ದರೂ ಲಿಂಗದಹಳ್ಳಿಯಲ್ಲಿ ಮಳೆಯೇ ಆಗುತ್ತಿಲ್ಲ. ಹೀಗಾಗಿ ಗ್ರಾಮದ ರೈತರು, ಜನರು ಕಂಗಲಾಗಿದ್ದಾರೆ.
ದೀಕ್ಷೆ ಪಡೆದ ಮುರುಘಾಸ್ವಾಮಿಗಳ ನೇತೃತ್ವದಲ್ಲಿ ಸತತ ಐದು ದಿನಗಳ ಕಾಲ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಲಾಗುತ್ತದೆ. ನಂತರ ಸಾಮೂಹಿಕ ಪ್ರಸಾದ ಸೇವನೆ ಮಾಡಲಾಗುತ್ತದೆ. ಈ ರೀತಿ ಆಚರಣೆಯಿಂದ ಮಳೆ ಬರುತ್ತೆ ಎನ್ನುವ ನಂಬಿಕೆ ಇದೆ.



