ದಾವಣಗೆರೆ: ಮನೆಯ ಯಾವುದೇ ವಸ್ತು ಮೇಲೆ ನೋಡಿದ್ರೂ ನೊಣ.. ನೊಣ.. ನೊಣ.. ಈ ನೊಣಗಳ ಹಾವಳಿಗೆ ಇಡೀ ಊರಿನ ಜನ ರೋಸಿ ಹೋಗಿದ್ದಾರೆ.
ಇದು ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಸ್ಥಿತಿಗತಿ. ಊರ ಹೊರ ವಲಯದಲ್ಲಿರುವ ಕೋಳಿ ಫಾರಂಗಳ ಹಾವಳಿಯಿಂದ ಊರ ತುಂಬಾ ನೊಣಗಳ ಕಾಟ ಜೋರಾಗಿದೆ. ಇದರಿಂದ ಗ್ರಾಮ ಜನರಿಗೆ ಸರಿಯಾಗಿ ಊಟ, ನಿದ್ದೆ ಸೇರುತ್ತಿಲ್ಲ.
ಮನೆಯ ಪ್ಲೇಟ್, ಬಲ್ಬ್, ಕಂಬ, ಅನ್ನ, ಸಾರು ಸೇರಿದಂತೆ ಎಲ್ಲೆಲ್ಲೂ ನೊಣಗಳು. ಈ ನೊಣಗಳ ಕಾಟಕ್ಕೆ ಗ್ರಾಮಸ್ಥರು ಅಕ್ಷರಕ್ಷಃ ಬೆಚ್ಚಿ ಬಿದ್ದಿದ್ದಾರೆ. ನಿತ್ಯವೂ ಈ ಗೋಳಿನ ಬದುಕು ಸಾಕು ಸಾಕಾಗಿ ಹೋಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಆಗಿರುವ ಪ್ರಯೋಜನವಾಗಿಲ್ಲ. ಕಳೆದ 9 ವರ್ಷಗಳಿಂದ ಈ ಸಮಸ್ಯೆಗೆ ರೋಸಿ ಹೋಗಿರುವ ಜನರ ಸಂಕಷ್ಟ, ಗೋಳು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ನೊಣಗಳ ಹಾವಳಿಯಿಂದ ಮುಕ್ತಿ ನೀಡಿದ ಅಧಿಕಾರಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಗ್ರಾಮಸ್ಥರು ಘೋಷಿಸಿದ್ದಾರೆ.
ಮಳೆಗಾಲದಲ್ಲಿ ರೋಗ ರುಜಿನಗಳು ಹೆಚ್ಚಾಗುತ್ತವೆ. ನೊಣಗಳ ಕಾಟಕ್ಕೆ ಚಿಕನ್ ಗುನ್ಯಾ, ಹೆಚ್ 1ಎನ್1. ಡೆಂಗ್ಯೂ, ಮಲೇರಿಯಾ, ಕಾಲರಾದಂತಹ ಸಾಂಕ್ರಾಮಿಕ ರೋಗ ರುಜಿನ ಬಂದರೆ ಯಾರು ಹೊಣೆ..? ಕೂಡಲೇ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವವರು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ, ಹೆಬ್ಬಾಳ ಗ್ರಾಮವನ್ನೇ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ.



