ದಾವಣಗೆರೆ: ರೈತರ ಪರವಾಗಿ ಕೆಲಸ ಮಾತನಾಡುತ್ತೇವೆಂದು ಎಲ್ಲ ಸರ್ಕಾರಗಳು ಭರವಸೆ ನೀಡುತ್ತವೆ. ಆದರೆ, ಅಧಿಕಾರ ಬಂದ ನಂತರ ರೈತರ ಪರ ಕೆಲಸ ಮಾಡುವುದು ಕಡಿಮೆಯಾಗಿದ್ದು, ಭರವಸೆಗಳು, ಭರವಸೆಗಳಾಗಿಯೇ ಉಳಿಯುತ್ತಿವೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಆನಗೋಡು ಸಮೀಪದ ಉಳುಪಿನಕಟ್ಟೆ ಕ್ರಾಸ್ ಬಳಿ ಇರುವ ರೈತ ಹುತಾತ್ಮರ ಸಮಾಧಿ ಬಳಿ ಹಮ್ಮಿಕೊಂಡಿದ್ದ 31 ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಮತ್ತು ಸ್ಮಾರಕ ಭವನ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು. ಬೇರೆ ಕ್ಷೇತ್ರಗಳಿಗೆ ಒತ್ತು ನೀಡಿದಂತೆ ಹೆಚ್ಚಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕಾದ ಜವಾಬ್ದಾರಿ ಯಾವುದೇ ಸರ್ಕಾರಕ್ಕೆ ಇದೆ ಎಂದರು.
ರೈತರು ಜೋಳ, ರಾಗಿ, ಭತ್ತ ಬೆಳೆಯದಿದ್ದರೆ ಜನ ಹಸಿವಿನಿಂದ ನರಳಬೇಕಾಗುತ್ತದೆ.ಅಡಿಕೆ, ಹಣ ತಿಂದು ಬದುಕಲು ಸಾಧ್ಯವಿಲ್ಲ. ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯಬೇಕಿದೆ. ಆದ್ದರಿಂದ ಸರ್ಕಾರ ಆಹಾರ ಪದಾರ್ಥಗಳನ್ನು ಬೆಳೆಯುವ ಜನರಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಬೆಳೆದ ಬೆಳೆಗೆ ಬೆಂಬಲ ಸಿಗುವಂತೆ ಆಗಬೇಕು,ಪ್ರತಿ ಕ್ವಿಂಟಲ್ ಅಡಿಕೆಗೆ 45 ರಿಂದ 50 ಸಾವಿರ ರೂ ಬೆಲೆ ಸಿಗುತ್ತಿದೆ. ಹಾಗೆಯೇ ರಾಗಿ, ಜೋಳಕ್ಕೆ ಕನಿಷ್ಟ 10 ಸಾವಿರ ರೂ ಬೆಲೆ ಸಿಗುವಂತೆ ಆಗಬೇಕು ಎಂದು ತಿಳಿಸಿದರು.
ರೈತರು ಏಕ ಬೆಳೆ ಪದ್ಧತಿ ಕೈ ಬಿಟ್ಟು ಬಹುಬೆಳೆ ಪದ್ಧತಿ ಅನುಸರಿಸಬೇಕು. ಒಂದು ಬೆಳೆ ವಿಫಲವಾದರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಆದರೆ ಇತ್ತೀಚಿಗೆ ತೆಂಗು.ಅಡಿಕೆ, ದಾಳಿಂಬೆ ಬೆಳೆಗಳತ್ತ ಗಮನಹರಿಸಲಾಗಿದೆ. ಇದರಿಂದ ಒಂದೇ ಬೆಳೆಯ ಮೇಲೆ ಅವಲಂಬನೆ ಆಗುತ್ತಿದ್ದಾರೆ ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ರೈತ ಸಂಘಗಳಲ್ಲಿ ಒಗ್ಗಟ್ಟು ಇಲ್ಲದೇ ಇರುವ ಕಾರಣದಿಂದ ಯಾವುದೇ ಸರ್ಕಾರಗಳು ಅನ್ನದಾತನ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸ್ವ ಪ್ರತಿಷ್ಟೆಗಾಗಿ ಛಿದ್ರಗೊಂಡಿರುವ ಎಲ್ಲ ರೈತ ಸಂಘಗಳನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ. ಮೆಕ್ಕೆಜೋಳಕ್ಕೆ ಹೆಕ್ಟೇರ್ 25 ಸಾವಿರ ರೂಪಾಯಿ ಬೆಳೆ ಪರಿಹಾರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಬರಪೀಡಿತ ತಾಲ್ಲೂಕು ಘೋಷಣೆಯಾದ ನಂತರ ಎಲ್ಲಾ ರೈತರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಗೌರವಾಧ್ಯಕ್ಷ ಎಚ್.ನಂಜುಂಡಪ್ಪ, ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ತಹಶಿಲ್ದಾರ್ ಡಾ.ಎಂ.ವಿ.ಅಶ್ವಥ್, ರೈತ ಮುಖಂಡ ತೇಜಸ್ವಿ ಪಟೇಲ್, ಶಾಮನೂರು ಲಿಂಗರಾಜ್, ಹೊನ್ನೂರು ಮುನಿಯಪ್ಪ, ಕಲ್ಲಿಂಗಪ್ಪ, ಆವರಗೆರೆ ರುದ್ರಮುನಿ ಮತ್ತಿತರರು ಇದ್ದರು.



