ದಾವಣಗೆರೆ; ದುಷ್ಕರ್ಮಿಗಳು ಅಸೂಯೆಯಿಂದ ಜಮೀನಿನಲ್ಲಿ ನಾಟಿ ಮಾಡಲು ತಂದಿಟ್ಟಿದ್ದ ಅಡಿಕೆ ಸಸಿಗಳಿಗೆ ಕಳೆ ನಾಶಕ ಸಿಂಪಡಿಸಿದ ಘಟನೆ ನಡೆದಿದೆ. ಇದರಿಂದ 1,500 ಸಸಿ ನಾಶವಾಗಿವೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಯರಲಕಟ್ಟೆ ಗ್ರಾಮದಲ್ಲಿ ಈ ಘಟನೆ ಜರುಗಿದೆ.
ಪರಮೇಶ್ವರಪ್ಪ ಎನ್ನುವ ರೈತ ನಾಟಿ ಮಾಡಲು 3 ಸಾವಿರ ಅಡಿಕೆ ಸಸಿಗಳನ್ನು ಶಿವಮೊಗ್ಗ ಕಡೆಯಿಂದ ತಂದಿದ್ದರು. ಅದರಲ್ಲಿ ಅರ್ಧ(1500) ಜಮೀನಿನಲ್ಲಿ ಮತ್ತು ಇನ್ನುಳಿದನ್ನು ಬೇರೆ ಕಡೆ ಇಟ್ಟಿದ್ದರು. ಜಮೀನಿನಲ್ಲಿ ಇಟ್ಟಿದ್ದ 1500 ಎಲ್ಲಾ ಸಸಿಗಳು ಒಣಗಿ ಹೋಗಿವೆ. ಯಾರೋ ದುಷ್ಕರ್ಮಿಗಳು ಅಸೂಯೆಯಿಂದ ಕಳೆನಾಶಕ ಸಿಂಪಡಿಸಿ ಸಸಿಗಳನ್ನು ನಾಶಪಡಿಸಿದ್ದಾರೆ ಎಂದು ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರಿಂದ ರೈತ ಪರಮೇಶ್ವರಪ್ಪಗೆ 50 ಸಾವಿರ ನಷ್ಟ ಉಂಟಾಗಿದೆ.



