ದಾವಣಗೆರೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ ರಾಮಚಂದ್ರ ಅವರ ಪರ ಕೆಲಸ ಮಾಡದೇ ಸೋಲಿಗೆ ಕಾರಣರಾದ ಆರೋಪದ ಹಿನ್ನೆಲೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಮತ್ತು ಅವರ ಮೂವರು ಪುತ್ರರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಜೆಪಿ ರಾಜ್ಯ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸೂಚನೆ ಮೆರೆಗೆ, ಮಾಜಿ ಶಾಸಕ ಗುರುಸಿದ್ದನಗೌಡ ಮತ್ತು ಇವರ ಪುತ್ರರಾದ ಡಾ.ಟಿ.ಜಿ. ರವಿಕುಮಾರ, ಟಿಜಿ ಅರವಿಂದಕುಮಾರ, ಟಿಜಿ ಪವನಕುಮಾರ ಅವರನ್ನು ಬರುವ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಜಗಳೂರು ಕ್ಷೇತ್ರದ ಶಾಸಕರಾಗಿದ್ದ ಗುರುಸಿದ್ದನಗೌಡ ಅವರು ಚೆಕ್ಡ್ಯಾಂ ಗೌಡ್ರು, ದಾವಣಗೆರೆ ವಾಜಪೇಯಿ ಎಂದೇ ಪ್ರಸಿದ್ಧಿ ಗಳಿಸಿದ್ದರು. ಇದಲ್ಲದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮುಂಬರುವ ಲೋಕಸಭೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು.



