ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ರೈತರೊಬ್ಬರಿಗೆ ದೋಷಪೂರಿತ ಟ್ರ್ಯಾಕ್ಟರ್ ನೀಡಿದ ಡೀಲರ್ ಹಾಗೂ ಕಂಪನಿಯ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ 80,000 ದಂಡ ಜತೆ ಹೊಸ ಟ್ರ್ಯಾಕ್ಟರ್ ನೀಡಲು ಆದೇಶಿಸಿದೆ.
ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ರಂಗಪ್ಪ, 2019ರ ಅಕ್ಟೋಬರ್ 15ರಂದು 7 ಲಕ್ಷ ಕೊಟ್ಟು ಚನ್ನಗಿರಿಯ ಶ್ರೀ ಗಜಾನನ ಐಷರ್ ಟ್ರೇಡರ್ಸ್‌ನಿಂದ ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಜಮೀನಿನಲ್ಲಿ ಸ್ವಲ್ಪದಿನ ಉಳುಮೆ ಮಾಡಿದ ನಂತರ ಟ್ರ್ಯಾಕ್ಟರ್ ಕೆಟ್ಟು ನಿಂತಿತ್ತು. ಆಗ ಪರಿಶೀಲಿಸಿದಾಗ ಗೇರ್ ಬಾಕ್ಸ್ ಕೆಟ್ಟು ಹೋಗಿತ್ತು. 2020ರ ಜುಲೈ ತಿಂಗಳಲ್ಲಿ ಶೋರೂಂಗೆ ಹೋಗಿ ದುರಸ್ತಿ ಮಾಡಿಸಿಕೊಂಡು ಬಂದಿದ್ದರು. ಮೂರು ಬಾರಿ ಗೇರ್ ಬಾಕ್ಸ್ ದುರಸ್ತಿಗೆ ಬಂದಿದ್ದು, ಅದನ್ನು ದುರಸ್ತಿ ಮಾಡಿಕೊಟ್ಟಿದ್ದರೂ ಸರಿಯಾಗಲಿಲ್ಲ.
ಆಗ ರೈತ ರಂಗಪ್ಪ ಟ್ರ್ಯಾಕ್ಟರ್ ವಾಪಸ್ ಪಡೆದು ಹೊಸ ಟ್ರ್ಯಾಕ್ಟರ್ ನೀಡುವಂತೆ ಶೋರೂಂ ಮಾಲೀಕರಿಗೆ ಮನವಿ ಮಾಡಿದ್ದರು. ಇದದಕ್ಕೆ ಡೀಲರ್ ಮಾಲೀಕ ಒಪ್ಪದಿದ್ದಾಗ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಆಯೋಗ, ರೈತನಿಗೆ ಹೊಸ ಟ್ರ್ಯಾಕ್ಟರ್ ಜತೆ ಕೇಸ್ ದಾಖಲಿಸಿ ಆರ್ಥಿಕ ನಷ್ಟಕ್ಕೆ 50,000, ಮಾನಸಿಕ ಕಿರುಕುಳ ಹಿಂಸೆಗೆ 25,000 ಹಾಗೂ ಆಯೋಗದ ಖರ್ಚು ಸೇರಿ 80ಸಾವಿರ ರಂಗಪ್ಪ ಅವರಿಗೆ ನೀಡುವಂತೆ ಸೂಚಿಸಿದೆ.



