ದಾವಣಗೆರೆ: ಕೇದಾರ ಪೀಠದ ಬುಡನೇ ಬಿಗಿ ಇಲ್ಲ, ಉಜ್ಜಯಿನಿ ಪೀಠದ ಬುಡದ ಬಗ್ಗೆ ಯಾಕೆ ಮಾತನಾಡಬೇಕು. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ರಂಭಾಪುರಿ ಪೀಠದ ಶಾಖಾ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕಿಡಿಕಾರಿದರು.
ಕೇದಾರ ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉಜ್ಜಯಿನಿ ಪೀಠದ ಶ್ರೀಗಳು ಓಡಿ ಬಂದ ಮಹಿಳೆ ಇದ್ದಂತೆ ಎಂದು ಕೇದಾರ ಶ್ರೀ ಹೇಳಿದ್ದಾರೆ. ಆದರೆ, ಉಜ್ಜಯಿನಿ ಪೀಠದಿಂದಲೇ, ಕೇದಾರ ಪೀಠದ ಭೀಮಾಶಂಕರಲಿಂಗ ಶ್ರೀ ಅಧಿಕಾರ ತೆಗೆದುಕೊಂಡವರು. ಹಾಗಾದ್ರೆ ಇವರೇನು ಎಂದರು.
ಭೀಮಾಶಂಕರಲಿಂಗ ಶ್ರೀ ಮಾತುಗಳಿಗೆ ರಂಭಾಪುರಿ ಪೀಠದ ಶ್ರೀಗಳು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ. ರಂಭಾಪುರಿ ಶ್ರೀ ಹಾಗು ಕೇದಾರ ಶ್ರೀ ಇಬ್ಬರು ಉಜ್ಜಯಿನಿ ಪೀಠದ ಬಗ್ಗೆ ಬಹಳ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಪಂಚಪೀಠಗಳಿಗೆ ಅಪಾರ ಪ್ರಮಾಣದ ಭಕ್ತರಿದ್ದಾರೆ. ಕರ್ನಾಟಕದಲ್ಲಿ ಇರೋದು ಒಂದೇ ಪೀಠ. ಅದು, ರಂಭಾಪುರಿ ಪೀಠ, ಉಜ್ಜಯಿನಿ ಪೀಠ ಇಲ್ವೇ ಇಲ್ಲ ಎಂದಿದ್ದಾರೆ. ಈ ಪೀಠದ ಬಗ್ಗೆ ಮಾತನಾಡಲು ನೈತಿಕತೆಯ ಹಕ್ಕು ಇವರಿಗೇನಿದೆ? ಇದು ಖಂಡನೀಯ. ಮತ್ತೊಂದು ಪೀಠಕ್ಕೆ ನೀವ್ಯಾಕೆ ಕೈ ಹಾಕ್ತೀರಿ? ಭಕ್ತರು ಈ ವಿಚಾರವಾಗಿ ಬೇಸರಗೊಂಡಿದ್ದಾರೆ. ಈ ಬಗ್ಗೆ ಸಮಸ್ಯೆ ಇದ್ದರೆ, ಮುಕ್ತವಾಗಿ ಬಗೆಹರಿಸಿಕೊಳ್ಳಿ. ಈ ರೀತಿ ಬಹಿರಂಗ ಸಭೆಯಲ್ಲಿ ಹೇಳುವುದು ಒಳ್ಳೆದಲ್ಲ ಎಂದರು.
ಭಕ್ತರಲ್ಲಿ ಗೊಂದಲ ಮೂಡಿಸಿದೆ. ತಮ್ಮ ಪೀಠ ಶ್ರೇಷ್ಠ ಇನ್ನೊಬ್ಬರ ಪೀಠ ಕನಿಷ್ಠ ಎಂಬ ಭಾವನೆ ಹುಟ್ಟುಹಾಕಿದ್ದಾರೆ. ಕೂಡಲೇ ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು. ಸಮಾನ ಪೀಠಗಳಿಗೆ ಗೌರವ ಸೂಚಿಸುವ ಸಂಬಂಧ ಪ್ರೀತಿ ವಿಶ್ವಾಸ ಇಟ್ಟುಕೊಳ್ಳಿ. ಬೇಡವಾದಲ್ಲಿ ಅವರ ಪಾಡಿಗೆ ಅವರಿರಬೇಕು. ಅದನ್ನು ಬಿಟ್ಟು ಮತ್ತೊಂದು ಮಠದ ವಿಚಾರಕ್ಕೆ ಕೈ ಹಾಕುವುದು ಸರಿಯಲ್ಲ. ಇವರು ಗುರುಗಳೇ ಅಲ್ಲ, ಕೇದಾರದಲ್ಲಿ ಪೀಠ ಇಟ್ಕೊಂಡು ಇಲ್ಲಿ ಬಂದು ಪೀಠ ಕಟ್ಟುವುದ್ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.