ದಾವಣಗೆರೆ: ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 8 ಲಕ್ಷ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಜಗಳೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 7.5 ಲಕ್ಷ ನಗದು ಹಾಗೂ 2 ಗ್ರಾಂ ಅಸಲಿ ಮತ್ತು 505 ಗ್ರಾಂ ನಕಲಿ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಬಟನಳ್ಳಿ ಗ್ರಾಮದ ಪ್ರಕಾಶ್ (29) ಹಾಗೂ ಮಾರಪ್ಪ (58) ಬಂಧಿತ ಆರೋಪಿಗಳು. ಮುಖ್ಯ ಆರೋಪಿ ಸುರೇಶ್‌ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ತೆಲಂಗಾಣ ರಾಜ್ಯದ ನಾಲಗೊಂಡಾ ಜಿಲ್ಲೆಯ ಚಳಕುರ್ತಿ ತಾಂಡಾದ ರಮಾವತ್ ಭಾಸ್ಕರ್ ವಂಚನೆಗೆ ಒಳಗಾದವರು.
ವಿಜಯನಗರ ಜಿಲ್ಲೆಯ ಹಂಪಿಯ ಸುರೇಶ್ ಲಾರಿ ಚಾಲಕನಾಗಿದ್ದು, 2021ರಲ್ಲಿ ಚಳಕುರ್ತಿ ತಾಂಡಾಗೆ ಭೇಟಿ ನೀಡಿದ್ದನು. ಈ ವೇಳೆ ರಮಾವತ್ ಭಾಸ್ಕರ್ ಪರಿಚಿತರಾಗಿದ್ದು, ಮೊಬೈಲ್ ನಂಬರ್ ಬದಲಿಸಿಕೊಂಡಿದ್ದರು. ಏ.9ರಂದು ರಮಾವತ್ ಗೆ ಕರೆ ಮಾಡಿದ ಸುರೇಶ್, ಚಿನ್ನದ ನಾಣ್ಯ ಸಿಕ್ಕಿವೆ. ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ್ದರು.
ಇದನ್ನು ನಂಬಿದ ರಮಾವತ್ 8 ಲಕ್ಷದೊಂದಿಗೆ ಅರ್ಧ ಕೆ.ಜಿ. ಚಿನ್ನದ ನಾಣ್ಯ ಖರೀದಿಸಲು ಬಳ್ಳಾರಿಗೆ ಬಂದಿದ್ದರು. ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ಬಳಿಗೆ ಬರಲು ಸೂಚಿಸಿದ್ದ ಆರೋಪಿಗಳು ಚಿನ್ನದ ನಾಣ್ಯಗಳನ್ನು ನೀಡಿ 8 ಲಕ್ಷ ಹಣ ಪಡೆದು ಪರಾರಿಯಾಗಿದ್ದರು. ಈ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.