ದಾವಣಗೆರೆ: ಒಂದು ಕಿಲೋಮೀಟರ್ ದೂರ ಕ್ರಮಿಸಿ 24 ಗಂಟೆಯೊಳಗೆ ಕೊಲೆ ಆರೋಪಿಯನ್ನು ಶ್ವಾನದಳದ ತಾರಾ ಸಹಾಯದೊಂದಿಗೆ ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದ ಜಯಪ್ಪ(29) ಬಂಧಿತ ಆರೋಪಿ. ಚಿತ್ರದುರ್ಗ ತಾಲೂಕಿನ ಭರಮಸಾಗರ ಸಮೀಪದ ಹೆಗಡೆಹಾಳ್ ಗ್ರಾಮದ ಶಿವಕುಮಾರ್ ಕೊಲೆಯಾದವರು.
ಕೊಲೆಯಾದ ಶಿವಕುಮಾರ್ ಮತ್ತು ಜಯಪ್ಪನ ಪತ್ನಿ ಪರಿಮಳ ನಡುವೆ ಅನೈತಿಕ ಸಂಬಂಧವಿತ್ತು. ಏ. 4 ರಂದು ಶಿವಕುಮಾರ್ ಪರಿಮಳಳನ್ನು ಭೇಟಿಯಾಗಲು ಹೊನ್ನೂರಿಗೆ ಬಂದಿದ್ದನು. ಈ ವೇಳೆ ಜಯಪ್ಪ ಮತ್ತು ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದು, ಜಯಪ್ಪ ಶಿವಕುಮಾರ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಶಿವಕುಮಾರ್ ಓಡಿ ಹೋಗಿದ್ದನು. ಬೆನ್ನತ್ತಿ ಹೋಗಿದ್ದ ಜಯಪ್ಪ ಹೊಲವೊಂದರಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದನು.
ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಪೊಲೀಸರು ಆರೋಪಿ ಜಯಪ್ಪನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 24 ಗಂಟೆಯಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



