ದಾವಣಗೆರೆ: ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಎರಡು ಗಂಟೆಯಲ್ಲಿಯೇ ಗಂಡು ಮಗುವೊಂದು ನಾಪತ್ತೆ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿಯಾದ ಉಮೇಸಲ್ಮಾ ಹಾಗೂ ಇಸ್ಮಾಯಿಲ್ ಜಬೀವುಲ್ಲಾ ದಂಪತಿಯ ಗಂಡು ಮಗು ನಾಪತ್ತೆಯಾಗಿದೆ. ಉಮೇಸಲ್ಮಾ ನಿನ್ನೆ (ಮಾ.16) ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಜನಿಸಿದ ಎರಡು ಗಂಟೆಯಲ್ಲಿಯೇ ಮಗು ಕಾಣುತ್ತಿಲ್ಲ. ಈ ಪ್ರಕರಣದಲ್ಲಿ ಮಗು ಕಳವಾದ ಅನುಮಾನ ವ್ಯಕ್ತವಾಗಿದೆ.
ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಮಗುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದಾರೆ. ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಮಗು ನಾಪತ್ತೆಯಾಗಿದೆ. ಈ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಸವನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.