ದಾವಣಗೆರೆ: ಜೈಲು ಶಿಕ್ಷೆಯ ಭಯದಿಂದ ಕೋರ್ಟ್ ನಲ್ಲಿಯೇ ವಿಷ ಸೇವಿಸಿ ಆರೋಪಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್ಸಿ ಕೋರ್ಟ್ ನಲ್ಲಿ ನಡೆದಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿನ ಆರೋಪಿ ಫಜಲ್ ಅಲಿ (38) ಇಂದು(ಆ.31) ಕೋರ್ಟ್ ಗೆ ಹಾಜರಾಗಿದ್ದ, ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆರೋಪಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಫಜಲ್ ಅಲಿ ಹಾಗೂ ಆತನ ಪತ್ನಿ ವಿಚ್ಚೇಧನ ಪಡೆದಿದ್ದರು. ಬಳಿಕ ಕೋರ್ಟ್ ಆದೇಶದಂತೆ ಪತ್ನಿಗೆ ಜೀವನಾಂಶ ಕೊಡಬೇಕಿದ್ದು, ಕಳೆದ ಕೆಲ ತಿಂಗಳಿಂದ ಪತ್ನಿಗೆ ಜೀವನಾಂಶವನ್ನ ಆರೋಪಿ ನೀಡರಲಿಲ್ಲ. ಈ ವಿಚಾರವನ್ನಪತ್ನಿ ಪರ ನ್ಯಾಯವಾದಿಗಳು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ಹಿನ್ನಲೆ ನ್ಯಾಯಾಧೀಶರಿಂದ ಜೈಲಿಗೆ ಹಾಕುವ ಆದೇಶ ಬರುವ ಭಯದಿಂದ ಕೋರ್ಟ್ಗೆ ಬರುವಾಗಲೇ ಜೇಬಿನಲ್ಲಿ ವಿಷದ ಬಾಟಲ್ ಇಟ್ಟುಕೊಂಡು ಬಂದಿದ್ದ ಫಜಲ್ ಅಲಿ ವಿಷ ಸೇವಿಸಿದ್ದಾನೆ. ಆರೋಪಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಈ ಘಟನೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.