ದಾವಣಗರೆ: ಅಜಾದ್ ನಗರದ ಮಹಿಳೆಯೊಬ್ಬರ ಮನೆಯಲ್ಲಿ ಅಕ್ರಮ ಗಾಂಜಾ ಸಂಗ್ರಹ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ 2 ಲಕ್ಷ ಮೌಲ್ಯದ 2 ಕೆ.ಜಿ. 150 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಜು.25ರಂದು ಬಸವನಗರ ಠಾಣೆಯಲ್ಲಿ ದಾಖಲಾಗಿದ್ದ ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣದ ಆರೋಪಿತನ ವಿಚಾರಣೆ ಕಾಲದಲ್ಲಿ ದಾವಣಗೆರೆ ನಗರದ ಅಜಾದ್ ನಗರ ಪೊಲೀಸ್ ಠಾಣಾ ಸರಹದ್ದಿನ 1ನೇ ಮೇನ್, 11ನೇ ಕ್ರಾಸ್ ನಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಶೋಧನಾ ವಾರೆಂಟ್ ಪಡೆದುಕೊಂಡು ಎಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ, ಮಂಜುನಾಥ.ಜಿ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುಬಸವರಾಜ ಹೆಚ್ ನೇತೃತ್ವದಲ್ಲಿ ಪಿಎಸ್ಐ ಪ್ರಮೀಳಮ್ಮ ಹೆಚ್. ಪಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡ ಅಜಾದ್ ನಗರದ 1ನೇ ಮೇನ್, 11ನೇ ಕ್ರಾಸ್ ನಲ್ಲಿರುವ ಆರೋಪಿತಳಾದ ಮೆಹಬೂಬಿ(68) ಮನೆಯ ಮೇಲೆ ದಾಳಿ ನಡೆಸಲಾಯಿತು.
ದಾಳಿ ವೇಳೆ ಆರೋಪಿ ಮನೆಯಲ್ಲಿ ಅಂದಾಜು ರೂ. 2,00,000-00 ಬೆಲೆಬಾಳುವ 2 ಕೆ.ಜಿ. 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಆರೋಪಿತೆಯನ್ನು ಅಜಾದ್ ನಗರ ಪೊಲೀಸ್ ಠಾಣೆಗೆ ನೀಡಲಾಗಿರುತ್ತದೆ.
ಆರೋಪಿತಳ ಹಿನ್ನಲೆ: ಸದರಿ ಆರೋಪಿತಳಾದ ಮೆಹಬೂಬಿ ಮೇಲೆ ಈಗಾಗಲೇ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ವಿಚಾರದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 110/2016 (ಸದರಿ ಪ್ರಕರಣದಲ್ಲಿ 06 ತಿಂಗಳು ಸಜೆ, 5000 ದಂಡ), ಗುನ್ನೆ ನಂ. 146/2018, ಗುನ್ನೆ ನಂ. 55/2019 (ಸದರಿ ಪ್ರಕರಣದಲ್ಲಿ ಘನ ನ್ಯಾಯಾಲಯವು 5000/- ದಂಡ ವಿಧಿಸಿರುತ್ತದೆ), ಮತ್ತು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 8/2013 ರಲ್ಲಿ ಭಾಗಿಯಾಗಿರುತ್ತಾಳೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.