ದಾವಣಗೆರೆ: ನಗರದ ಹೊರ ವಲಯದ ಎಚ್.ಕಲ್ಪನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಊಟಕ್ಕೆಂದು ನಿಲ್ಲಿಸಿದ್ದ ಲಾರಿಗಳಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ನ್ನು ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 1200 ನಗದು, 10 ಸಾವಿರ ಮೌಲ್ಯದ 1 ಮೊಬೈಲ್ ಹಾಗೂ 1.20 ಲಕ್ಷ ಮೌಲ್ಯದ ಆಟೋ ಜಪ್ತಿ ಮಾಡಲಾಗಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸೂಡಂಬಿ ಗ್ರಾಮದ ಲಾರಿ ಚಾಲಕ ಸಂದೀಪ ಶಿವನಗೌಡ ಹಿರೇಗೌಡ ಜೂ.7ರಂದು ರಾತ್ರಿ ಲಾರಿಗೆ ಬಾಡಿ ಕಟ್ಟಿಸಲೆಂದು ತುಮಕೂರಿಗೆ ಹೋಗಿದ್ದರು. ಲಾರಿಯನ್ನು ತೆಗೆದುಕೊಂಡು ಪೂನಾ- ಬೆಂಗಳೂರು ರಸ್ತೆ ಮಾರ್ಗವಾಗಿ ಸಾಗುವಾಗ ದಾವಣಗೆರೆ ತಾಲೂಕಿನ ಎಚ್.ಕಲ್ಪನಹಳ್ಳಿ ಬಳಿ ರಾತ್ರಿ ಊಟಕ್ಕೆಂದು ಲಾರಿ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಆಟೋ ರಿಕ್ಷಾದಲ್ಲಿ ಬಂದ ಕಿಡಿಗೇಡಿಗಳು ಅವರನ್ನು ದರೋಡೆ ಮಾಡಿದ್ದರು. ಈ ಬಗ್ಗೆ ದೂರು ನೀಡಲಾಗಿತ್ತು.
ಎಸ್‌ಜೆಎಂ ನಗರದ ಆಟೋ ಚಾಲಕ ಕುಶಾಲ್ (20), ಆಂಜನೇಯ ಮಿಲ್ ಬಳಿಯ ನಿವಾಸಿ, ಕೂಲಿ ಕೆಲಸಗಾರ ವೆಂಕಟೇಶ (19), ಕಿರಣಕುಮಾರ (19) ಹಾಗೂ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ, ದೂರುದಾರ ಸಂದೀಪ್ ಶಿವನಗೌಡ ಹಿರೇಗೌಡ ಅವರಿಂದ ದರೋಡೆ ಮಾಡಿದ್ದ ₹1200 ನಗದು, ₹10 ಸಾವಿರ ಮೌಲ್ಯದ ಫೋನ್, ಕೃತ್ಯಕ್ಕೆ ಬಳಸಿದ್ದ ₹1.20 ಲಕ್ಷ ಮೌಲ್ಯದ ಆಟೋ ರಿಕ್ಷಾವನ್ನು ಜಪ್ತಿ ಮಾಡಿದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದರೋಡೆ ಪ್ರಕರಣ ಭೇದಿಸಿರುವ ಹಿನ್ನೆಲೆಯೇ ಕುತೂಹಲಕರವಾಗಿದೆ. ಆಟೋದಲ್ಲಿ ಬಂದ ಐವರು ದರೋಡೆಕೋರರು ನಿಂತಿದ್ದ ಲಾರಿಯನ್ನು ಹತ್ತಿ, ಚಾಲಕನಿಂದ ಹಣ, ಮೊಬೈಲ್ ದರೋಡೆ ಮಾಡುತ್ತಿದ್ದರು. ಈ ವೇಳೆ ಪ್ರತ್ಯಕ್ಷದರ್ಶಿಯೊಬ್ಬರು ತಕ್ಷಣ 112 ತುರ್ತು ಸ್ಪಂದನಾ ವಾಹನಕ್ಕೆ ಕರೆ ನೀಡಿ, ಮಾಹಿತಿ ನೀಡಿದ್ದರು. ಹೆದ್ದಾರಿ ಗಸ್ತು ಕರ್ತವ್ಯದಲ್ಲಿದ್ದ 112 ತುರ್ತು ಸ್ಪಂದನ ವಾಹನ ಸಿಬ್ಬಂದಿ ಸಕಾಲಕ್ಕೆ ಸ್ಥಳಕ್ಕೆ ದಾವಿಸಿದರು. ಆಗ ಐವರು ಆರೋಪಿಗಳು ವಶಕ್ಕೆ ಪಡೆಯಲಾಗಿದೆ.
ಕಿಡಿಗೇಡಿಗಳು ತಪ್ಪಿಸಿಕೊಂಡು ಓಡಿದಾಗ ಪೊಲೀಸ್ ಸಿಬ್ಬಂದಿ ಬೆನ್ನುಹತ್ತಿ, ಇಬ್ಬರನ್ನು ಹಿಡಿದು, ದರೋಡೆಗೆ ಒಳಗಾದ ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಉಳಿದವರನ್ನು ಅನಂತರ ವಶಕ್ಕೆ ಪಡೆಯಲಾಯಿತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಸಂತೋಷ, ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ ಸಿದ್ದನಗೌಡ ಮಾರ್ಗದರ್ಸನದಲ್ಲಿ ಕಾರ್ಯಾಚರಣೆ ನಡೆಯಿತು. ಗ್ರಾಮಾಂತರ ಇನ್‌ಸ್ಪೆಕ್ಟರ್ ಇ.ವೈ.ಕಿರಣಕುಮಾರ, ಪಿಎಸ್ಐ ಜ್ಯೋವಿತ್ ರಾಜ್ ಮತ್ತು 112 ಸಿಬ್ಬಂದಿ ಸಿದ್ದೇಶ, ಚಾಲಕ ವಿನೋದ, ಠಾಣೆ ಸಿಬ್ಬಂದಿ ದೇವೇಂದ್ರ ನಾಯ್ಕ, ನಾಗಭೂಷಣ, ಅಣ್ಣಯ್ಯ, ಮಹಮ್ಮದ್ ಯೂಸೂಫ್ ಅತ್ತಾರ್, ಪಿ.ಎಂ.ವೀರೇಶ ಕಾರ್ಯಾಚರಣೆ ತಂಡದಲ್ಲಿದ್ದರು.



