ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತು (MDMA) ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಆರೋಪಿಗಳಿಂದ 4.5 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ನಿನ್ನೆ ( ಮೇ 21) ಮಧ್ಯಾಹ್ನ ದಾವಣಗೆರೆ ನಗರದ ಕೆ.ಆರ್. ರಸ್ತೆಯ ಎಲ್.ಐ.ಸಿ ಕಚೇರಿ ಹಿಂಭಾಗದ ಬಿ ಟಿ ಲೇ ಔಟ್ನ 1ನೇ ಮೇನ್, 4ನೇ ಕ್ರಾಸ್ನಲ್ಲಿರುವ ಪಾರ್ಕ್ ಗೇಟ್ನ ಮುಂಭಾಗದಲ್ಲಿ ಯಾರೋ ವ್ಯಕ್ತಿಯು ಮಾದಕ (MDMA) ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಖಚಿತ ಮಾಹಿತಿ ಬಂದಿತ್ತು. ಪೊಲೀಸ್ ಅಧೀಕ್ಷಕರವರು ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಯ ಪಿಐ ಅಶ್ವಿನ್ ಕುಮಾರ್ ನೇತೃತ್ವದಲ್ಲಿ ಡಿಸಿಆರ್ಬಿ ಘಟಕದ ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡಿ ದಾಳಿ ಮಾಡಲು ಸೂಚಿಸಿದ್ದು, ಈ ತಂಡವು ಹೆಚ್ಚುವರಿ ಪೊಲೀಸ್ ಅಧೀಕ್ಷ ವಿಜಯಕುಮಾರ್ ಎಂ ಸಂತೋಷ್, ಶ್ರೀ ಮಂಜುನಾಥ ಜಿ ಮತ್ತು ಮಲ್ಲೇಶ್ ದೊಡ್ಮನಿ, ಡಿವೈಎಸ್ಪಿ ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.
ಪಾರ್ಕ್ ಗೇಟ್ನ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಕುಳಿತುಕೊಂಡಿದ್ದ ವ್ಯಕ್ತಿಯನ್ನು ಸುತ್ತುವರಿದು ಹಿಡಿದುಕೊಂಡು ವಿಚಾರಿಸಿದಾಗ ಸದರಿ ವ್ಯಕ್ತಿಯು ತಡವರಿಸುತ್ತಾ ನನಗೆ ಹಿಂದಿ ಮತ್ತು ಗುಜರಾತಿ ಭಾಷೆ ಮಾತ್ರ ಬರುತ್ತದೆ ಎಂದು ತಿಳಿಸಿದ್ದಾನೆ. ಆರೋಪಿಯನ್ನು ಅಶೋಕ್ ಯಾನೆ ಅಶೋಕ್ ಕುಮಾರ ತಂದೆ ಪೂನಮ್ ರಾಮ್, 24 ವರ್ಷ, ಸ್ಟೀಲ್ ರೇಲಿಂಗ್ ಕೆಲಸ, ವಾಸ : ರಾಮದಾಸ್ ಲೇ ಔಟ್, ಜವರೇ ಗೌಡ ನಗರ, ಬೆಂಗಳೂರು ದಕ್ಷಿಣ, ಸ್ವಂತ ಊರು ಹಾಲಿವ್ ಗ್ರಾಮ, ಚಿತ್ತಲ್ ವಾಸ್ ತಾಲ್ಲೂಕು, ಸಾಂಚೂರು ಜಿಲ್ಲೆ, ರಾಜಸ್ಥಾನ ರಾಜ್ಯ ಎಂದು ಗೊತ್ತಾಗಿದೆ.
ನಂತರ ಸದರಿ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ತಾನು ಮಾದಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಇಲ್ಲಿ ಕುಳಿತುಕೊಂಡಿರುತ್ತೇನೆ ಎಂದು ತಿಳಿಸಿದ್ದು, ನಂತರ ಪಂಚರುಗಳ ಸಮಕ್ಷಮದಲ್ಲಿ ಆರೋಪಿತನನ್ನು ಶೋಧ ಮಾಡಿದಾಗ ಸದರಿ ವ್ಯಕ್ತಿಯ ಬಳಿ ಇದ್ದ ವಸ್ತುಗಳನ್ನು ಪರಿಶೀಲಿಸಿ ನೋಡಿದಾಗ 1) ಆಫೀಮ್ ಮೊಗ್ಗಿನ ಒಣಗಿದ ಪೌಡರ್ ಇದ್ದು, ಪ್ಲಾಸ್ಟಿಕ್ ಕವರ್ ಸಮೇತ್ ಸುಮಾರು 35 ಗ್ರಾಂ 2) MDMA Crystal 3 ಸಣ್ಣ ಪ್ಲಾಸ್ಟಿಕ್ ಕವರ್ ನಲ್ಲಿ ಗೋಧಿ ಬಣ್ಣದಂತೆ ಕಂಡು ಬಂದಿದ್ದು, ಪ್ಲಾಸ್ಟಿಕ್ ಕವರ್ ಸಮೇತ ಸುಮಾರು ೦8 ಗ್ರಾಂ, 3) Opium ಪೇಸ್ಟ್ ಪ್ಲಾಸ್ಟಿಕ್ ಕವರ್ ಸಮೇತ ಸುಮಾರು 07 ಗ್ರಾಂ, 4) MDMA Cystal ಬಿಳಿ ಬಣ್ಣದಂತೆ ಕಂಡು ಬರುವ ಪ್ಲಾಸ್ಟಿಕ್ ಕವರ್ ಸಮೇತ ಸುಮಾರು 15 ಗ್ರಾಂ ಮಾದಕ ವಸ್ತುಗಳನ್ನು ತೂಕ ಮಾಡಲಾಗಿ ಒಟ್ಟು ತೂಕ 65 ಗ್ರಾಂ ಇದ್ದು, ಇವುಗಳ ಅಂದಾಜು ಬೆಲೆ 4.50,000/- ರೂಪಾಯಿಗಳು ಆಗಿರುತ್ತದೆ.
ಕಾನೂನು ಬಾಹಿರವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿತ ಅಶೋಕ್ ಯಾನೆ ಅಶೋಕ್ ಕುಮಾರ್ ತಂದೆ ಪೂನಮ್ ರಾಮ್, 28 ವರ್ಷ ಈತನ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಸದರಿ ದಾಳಿ ಸಮಯದಲ್ಲಿ ಭಾಗವಹಿಸಿದ್ದ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್, ಪಿಎಸ್ಐ ಇಮ್ತಿಯಾಜ್, ಸಿಬ್ಬಂದಿ ಡಿಸಿಆರ್ಬಿ ವಿಭಾಗದ ಮಜೀದ್, ರಮೇಶ್ ನಾಯ್ಕ್, ಕೆ.ಟಿ. ಆಂಜನೇಯ, ಬಾಲರಾಜ್, ಮಾಲತೇಶ್ ಕೆಳಗಿನಮನೆ, ಕೃಷ್ಣ ನಂದ್ಯಾಲ, ತಿಪ್ಪೇಸ್ವಾಮಿ, ನಾಗರಾಜ ಡಿ.ಬಿ ರವರನ್ನು ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಐಪಿಎಸ್ ಶ್ಲಾಘಿಸಿದ್ದಾರೆ.