ದಾವಣಗೆರೆ: ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದ ಆರೋಪಿ ಮತ್ತೊಂದು ಕೊಲೆ ಯತ್ನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾನೆ. ಅಂಜಲಿ ಹತ್ಯೆ ಬಳಿಕ ಆರೋಪಿ ವಿಶ್ವ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿ ಚಾಕು ಹಾಕಲು ಮುಂದಾಗಿದ್ದ. ಪ್ರಯಾಣಿಕರು ಆತನಿಗೆ ರೈಲಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು.
ವಿಶ್ವ ಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯತ್ತ ತೆರಳುತ್ತಿದ್ದ ವಿಶ್ವ, ರೈಲಿನಲ್ಲಿ ಗದಗ ಜಿಲ್ಲೆಯ ಕಲ್ಲುಮುಳಗುಂದ ಗ್ರಾಮದ ಲಕ್ಷ್ಮಿಎಂಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಚಾಕುವಿನಿಂದ ಚುಚ್ಚಿ ಕೊಲೆಗೂ ಯತ್ನಿಸಿದ್ದ. ಮಹಿಳೆಯ ಚೀರಾಟದಿಂದ ಎಚ್ಚೆತ್ತ ಪ್ರಯಾಣಿಕರು, ಮಹಿಳೆಯ ಪತಿ ಇತರರು ವಿಶ್ವನನ್ನು ಹಿಡಿದು ಥಳಿಸಿದ್ದರು.
ಬಹಳಷ್ಟು ಸಮಯ ರೈಲಿನ ಶೌಚಗೃಹದ ಬಳಿಯೇ ನಿಂತುಕೊಂಡಿದ್ದ. ಮಹಿಳೆಯೊಬ್ಬರು ಶೌಚಕ್ಕೆ ಹೋದಾಗ ಅವರನ್ನು ಕಿಂಡಿಯಿಂದ ನೋಡಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರ ಬಂದು ನಿನಗೆ ಅಕ್ಕ-ತಂಗಿಯರು ಇಲ್ವಾ ಎಂದು ಬೈದಿದ್ದಾರೆ. ಆಗ ವಿಶ್ವ ತನ್ನ ಬಳಿಯಿದ್ದ ಚಾಕೂ ತೆಗೆದು ನೀನು ಈ ವಿಚಾರವನ್ನು ಎಲ್ಲರಿಗೂ ಹೇಳುತ್ತಿಯಾ ಎಂದು ಹೊಟ್ಟೆಗೆ ಚಾಕೂ ಹಾಕಲು ಮುಂದಾಗಿದ್ದಾನೆ. ಮಹಿಳೆ ಆತನಿಂದ ತಪ್ಪಿಸಿಕೊಂಡರೂ ಆಕೆಯ ಕೈಗೆ ಚಾಕೂ ಹರಿದಿದೆ. ನಂತರ ಮಹಿಳೆ ಕೂಗಾಡತೊಡಗಿದಾಗ ಆಕೆಯ ಪತಿ ವಿಶ್ವನನ್ನು ಹಿಡಿಯಲು ಯತ್ನಿಸಿದ್ದಾರೆ. ಪೊಲೀಸರಿಗೆ ಹಿಡಿದು ಕೊಡಬಹುದು ಇಲ್ಲವೇ ಸಿಕ್ಕಿ ಬೀಳಬಹುದು ಎಂಬ ಭಯದಿಂದ ಮಾಯಕೊಂಡ ಸಮೀಪ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಹಾರಿದಾಗ ತಲೆಗೆ ತೀವ್ರ ಪೆಟ್ಟು ಬಿದ್ದು ಹಳಿಗಳ ಸಮೀಪವೇ ಬಿದ್ದಿದ್ದನು.
ರೈಲಿನಿಂದ ಜಿಗಿದು ಗಾಯಗೊಂಡಿದ್ದ ವಿಶ್ವನನ್ನು ಸ್ಥಳೀಯರು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರೈಲ್ವೆ ಪೊಲೀಸ್ ಇನ್ಸಪೆಕ್ಟರ್ ಸಂತೋಷಕುಮಾರ ಪಾಟೀಲ ಆತನ ನಡುವಳಿಕೆ ನೋಡಿ ಈತ ಅಂಜಲಿ ಕೊಲೆ ಆರೋಪಿ ಕಂಡಂತೆ ಕಾಣುತ್ತಾನಲ್ಲ ಎಂದು ಅನುಮಾನಗೊಂಡು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಗುರುತಿಸಿ ಬಂಧಿಸಿ ಕರೆದೋಯ್ದಿದ್ದಾರೆ.
ಮಾಧ್ಯಮಗಳಲ್ಲಿ ಆರೋಪಿಯ ಫೋಟೋ ನೋಡಿದ್ದರಿಂದಲೂ ಹುಬ್ಬಳ್ಳಿಯ ಕೊಲೆ ಆರೋಪಿ ಏನಾದರೂ ಇರಬಹುದಾ ಎಂಬ ಸಂಶಯವೂ ಬಂದಿದೆ. ಅದೇ ಸಂಶಯದ ಮೇಲೆ ರೈಲ್ವೆ ಪೊಲೀಸರು ಮತ್ತೊಮ್ಮೆ ಆರೋಪಿ ವಿಶ್ವನನ್ನು ದಾಖಲಿಸಿದ್ದ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಬರುವ ವೇಳೆಗೆ ಆರೋಪಿ ಆಗಲೇ ಆಸ್ಪತ್ರೆಯಿಂದ ಹೊರ ಹೋಗಲು ಯತ್ನಿಸಿದ್ದನು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವಿಶ್ವನನ್ನು ವಶಕ್ಕೆ ತೆಗೆದುಕೊಂಡು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಾವಣಗೆರೆಗೆ ಆಗಮಿಸಿದ ಹುಬ್ಬಳ್ಳಿ ಪೊಲೀಸರು ಅಂಜಲಿ ಕೊಲೆ ಆರೋಪಿ ಇವನೇ ಎಂಬುದನ್ನು ಖಚಿತಪಡಿಸಿ ಕೊಂಡು ಬಂಧಿಸಿ, ಹುಬ್ಬಳ್ಳಿಗೆ ಕರೆದೊಯ್ದದಿದ್ದಾರೆ. ದಾವಣಗೆರೆ ರೈಲ್ವೆ ಪೊಲೀಸರು ತೋರಿದ ಸಮಯಪ್ರಜ್ಞೆಯಿಂದ ಅಂಜಲಿ ಕೊಲೆ ಆರೋಪಿ ಪತ್ತೆಯಾಗಿದ್ದಾನೆ.



