ದಾವಣಗೆರೆ: ಪತಿಯೇ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ಘಟನೆ ತಾಲೂಕಿನ ಕೊಡಗನೂರು ಗ್ರಾಮದ ಬಳಿ ನಡೆದಿದೆ. ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿಯಾಗಿದ್ದರಿಂದ ಕೊಲೆ ಮಾಡಿ ಕೆರೆಗೆ ಎಸೆದಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಕಾವ್ಯ (22) ಕೊಲೆಯಾದ ಗೃಹಿಣಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ (24) ಕೊಲೆ ಮಾಡಿದ ಪತಿಯಾಗಿದ್ದಾನೆ. ಐದು ವರ್ಷಗಳ ಹಿಂದೆ ಸಾಸಲುಹಳ್ಳ ಗ್ರಾಮದ ಕಾವ್ಯಳನ್ನು ಸಚಿನ್ ಮದುವೆಯಾಗಿದ್ದನು. ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದ ಚೈತ್ರ (21) ಎನ್ನುವ ಯುವತಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ಸಚಿನ್, ಕಾವ್ಯಾಳನ್ನು ಮದುವೆಯಾಗಿದ್ದನು.
ಈ ಅಕ್ರಮ ಸಂಬಂಧಕ್ಕೆ ಕಾವ್ಯಾ ಅಡ್ಡಿಯಾಗುತ್ತಿದ್ದಾಳೆಂದು ಸಚಿನ್ ಮತ್ತು ಚೈತ್ರಾ ಸೇರಿಕೊಂಡು ಕಾವ್ಯಾಳನ್ನು ಕೊಲೆ ಮಾಡಿದ್ದಾರೆ. ಬಳಿಕ ಗೋಣಿ ಚೀಲದಲ್ಲಿ ಕಾವ್ಯಾಳ ಮೃತದೇಹವನ್ನು ತುಂಬಿ ಕೊಡಗನೂರು ಕೆರೆಗೆ ಹಾಕಿದ್ದರು. ಹತ್ತು ದಿನಗಳ ಹಿಂದೆ ನಡೆದ ಈ ಕೊಲೆ ಈಗ ಬೆಳಕಿಗೆ ಬಂದಿದ್ದು, ಪೊಲೀಸರು ಸಮ್ಮುಖದಲ್ಲಿ ಮೃತದೇಹವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ.



