ದಾವಣಗೆರೆ: ರಾತ್ರೋರಾತ್ರಿ ಅಡಿಕೆ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 12,50,000 ರೂ ಬೆಲೆ ಬಾಳುವ 12 ಕ್ವಿಂಟಲ್ 95 ಕೆ.ಜಿ. ಅಡಿಕೆ ಮತ್ತು ಕೃತ್ಯಕ್ಕೆ ಬಳಿಸಿದ ಮಾರುತಿ ಕಾರು ವಶಕ್ಕೆ ಪಡೆಯಲಾಗಿದೆ.
ಚನ್ನಗಿರಿ ತಾಲ್ಲೂಕಿನ ವಡ್ನಾಳ್ ಗ್ರಾಮದ ಈಶ್ವರಪ್ಪ ಖೇಣಿ ಇಟ್ಟಿದ್ದ ಸುಮಾರು 6 ಕ್ವಿಂಟಲ್ ಒಣ ಅಡಿಕೆಯನ್ನು ಯಾರೋ ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಚನ್ನಗಿರಿ ಉಪವಿಭಾಗದ ಡಿವೈಎಸ್ ಪಿ ಪ್ರಶಾಂತ್ ಜಿ ಮುನ್ನೋಳಿ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನಿರಂಜನ ಬಿ ನೇತ್ರತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಆರೋಪಿ 1) ಛತ್ರಪತಿ @ ಗುಂಡ, (33), ವಾಸ: ಕರೆಕಟ್ಟೆ ಗ್ರಾಮ, 2) ಧನುಂಜಯ್ಯನಾಯ್ಕ @ ಗಿಡ್ಡ (35), ಕೂಲಿ ಕೆಲಸ ವಾಸ: ಕಾಳಘಟ್ಟ ಗ್ರಾಮ ಹೊಳಲ್ಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆ 3) ಗಿರೀಶ (27), ಕೂಲಿ ಕೆಲಸ ವಾಸ: ಕಾಳಘಟ್ಟ ಗ್ರಾಮ ಹೊಳಲ್ಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆ ಇವರನ್ನು ಬಂಧಿಸಲಾಗಿದೆ. ಆರೋಪಿತರಿಂದ ಒಟ್ಟು 12 ಕ್ವಿಂಟಲ್ 95 ಕೆ.ಜಿ. ಅಡಿಕೆ ಮತ್ತು ಕೃತ್ಯಕ್ಕೆ ಬಳಿಸಿದ ಕಾರ್ ನಂ ಕೆಎ17-ಡಿ-9963 ನೇ ನಂಬರಿನ ಮಾರುತಿ ಎರ್ಟಿಗ ಕಾರು ಒಟ್ಟು 12,50,000 ರೂ ಬೆಲೆ ಬಾಳುವ ಅಡಿಕೆ ಮತ್ತು ಕಾರನ್ನು ವಶಪಡಿಸಿಕೊಂಡಿದ್ದು ಚನ್ನಗಿರಿ ಪೊಲೀಸ್ ಠಾಣೆಯ 4 ಪ್ರಕರಣಗಳು ಹಾಗೂ ಹೊಳೆಹಬ್ಬೂರು ಪೊಲೀಸ್ ಠಾಣೆಯ 01 ಪ್ರಕರಣ ಪತ್ತೆಯಾಗಿದೆ.ಕಾರ್ಯಾಚರಣೆ ನಡೆಸಿದ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯ್ ಕುಮಾರ್ ಎಂ. ಸಂತೋಷ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.