ದಾವಣಗೆರೆ: ಮನೆಯ ಪಾಯ ತೆಗೆಯುವಾಗ ಚಿನ್ನ ಸಿಕ್ಕಿದೆ ಎಂದು ನಂಬಿಸಿ, ನಕಲಿ ಚಿನ್ನ ನೀಡಿ ಗುತ್ತಿಗೆದಾರನಿಗೆ 60 ಲಕ್ಷ ರೂಪಾಯಿ ವಂಚನೆ ಮಾಡಲಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ನಡೆದಿದೆ. ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ಧನ ಎಂಬುವವರಿಗೆ ವಂಚನೆ ಮಾಡಲಾಗಿದೆ.
ತಾಲ್ಲೂಕಿನ ನಿವಾಸಿಗಳಾದ ಕುಮಾರ್ ಹಾಗೂ ಮುದುಕಪ್ಪ, ಚಿಕ್ಕಬಳ್ಳಾಪುರದ ಗುತ್ತಿಗೆದಾರ ಗೋವರ್ಧನ್ ಅವರಿಗೆ 2.5 ಕೆ.ಜಿ. ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 60 ಲಕ್ಷ ನಗದು ಪಡೆದು ವಂಚಿಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವರ್ಧನ್, ಚನ್ನಗಿರಿ ತಾಲ್ಲೂಕಿನಲ್ಲಿ ಹಲವು ತಿಂಗಳಿಂದ ವಿವಿಧ ಕಾಮಗಾರಿ ಮಾಡಿಸುತ್ತಿದ್ದಾರೆ. ಇವರ ಬಳಿ ಹೋಗಿದ್ದ ಕುಮಾರ್, ನಾನು ನಿಮ್ಮ ಬಳಿ ಕೆಲಸ ಮಾಡುತ್ತಿರುವವನು ಎಂದು ಪರಿಚಯಿಸಿಕೊಂಡಿದ್ದರು. ನಂತರ ಗೋವರ್ಧನ್‌ಗೆ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದರು. ಪಕ್ಕದ ಮನೆಯ ಪಾಯ ತೆಗೆಯುವಾಗ ಮುದುಕಪ್ಪ ಎಂಬುವರಿಗೆ ಹಳೆ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿವೆ. ನಿಮಗೆ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದಿದ್ದ. ಒಂದು ನಾಣ್ಯವನ್ನೂ ಕೊಟ್ಟಿದ್ದ. ಅದನ್ನು ಪರೀಕ್ಷಿಸಿದಾಗ ಅದು ಅಸಲಿ ಎಂಬುದು ಖಾತರಿಯಾಗಿತ್ತು. ಅದಾಗಿ ಕೆಲ ದಿನಗಳ ನಂತರ ಮತ್ತೊಮ್ಮೆ ಭೇಟಿಯಾಗಿದ್ದ ಕುಮಾರ್, ಒಟ್ಟು 5 ಕೆ.ಜಿ. ನಾಣ್ಯಗಳಿವೆ. ನಿಮಗೆ ಕೆ.ಜಿಗೆ 25 ಲಕ್ಷದಂತೆ ಕೊಡಿಸುತ್ತೇನೆ ಎಂದಿದ್ದ. ಆತನ ಮಾತು ನಂಬಿ 2.5 ಕೆ.ಜಿ. ನಾಣ್ಯ ಖರೀದಿಸಿದ್ದೆ ಎಂದು ಗೋವರ್ಧನ್ ದೂರಿನಲ್ಲಿ ತಿಳಿಸಿದ್ದಾರೆ.
ಇದೇ 23ರಂದು ತಾಲ್ಲೂಕಿನ ನಲ್ಲೂರು ಬಳಿ ಇರುವ ಲಿಂಗದಹಳ್ಳಿಯ ಭದ್ರಾ ನಾಲೆಯ ಹತ್ತಿರ ಹಣ ತೆಗೆದುಕೊಂಡು ಹೋಗಿದ್ದು., ಅಲ್ಲಿಗೆ ಕುಮಾರ್ ಹಾಗೂ ಮುದುಕಪ್ಪ ಬಂದಿದ್ದರು. ಹಣವನ್ನು ಅವರಿಗೆ ಕೊಟ್ಟು ನಾಣ್ಯಗಳನ್ನು ಪಡೆಯುತ್ತಿರುವ ಸಂದರ್ಭದಲ್ಲೇ ಅಪರಿಚಿತ ವ್ಯಕ್ತಿಗಳಿಬ್ಬರು ಬೈಕಿನಲ್ಲಿ ಸ್ಥಳಕ್ಕೆ ಬಂದಿದ್ದರು. ನಾಲೆಯ ಬಳಿ ಕೊಲೆಯಾಗಿದೆ. ಪೊಲೀಸರು ಬರುತ್ತಿದ್ದಾರೆ ಎಂದರು. ಹೆದರಿ ನಾವು ಜಾಗ ಖಾಲಿ ಮಾಡಿದೆವು. ತುಮಕೂರಿನ ಶಿರಾ ಬಳಿ ನಾಣ್ಯ ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ.



