ದಾವಣಗೆರೆ: ನಗರದ ಕುಂದವಾಡ ರಸ್ತೆಯ ಮನೆಯೊಂದರಲ್ಲಿ ಕಳ್ಳನೊರ್ವ, ಚಾಕು ತೋರಿಸಿ ಮಹಿಳೆ, ಮಗುವಿನ ಮೇಲೆ ಹಲ್ಲೆ ಮಾಡಿ ನಗದು ಹಣ, ಆಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ಕುಂದವಾಡ ರಸ್ತೆಯಲ್ಲಿನ ಲೇಕ್‌ವೀವ್ ಬಡಾವಣೆಯಲ್ಲಿ ಶ್ರೀನಾಥ್ ಅವರ ಪತ್ನಿ ಯೊಗೇಶ್ವರಿ ಮತ್ತು ಮಗುವಿನ ಮೇಲೆ ಹಲ್ಲೆ ನಡೆದಿದೆ. ಕಳ್ಳ 5 ಲಕ್ಷದ ಆಭರಣ, ನಗದು ದೋಚಿ ಪರಾರಿಯಾಗಿದ್ದಾನೆ. ತೀವ್ರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀನಾಥ್ ಅವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಯೋಗೇಶ್ವರಿ ಮನೆಯ ಬಾಗಿಲು ತೆರೆದು ಕಸ ಹಾಕಲು ಹೊರಗಡೆ ಹೋದಾಗ, ಅಲ್ಲಿಯೇ ಕಾಯುತ್ತಿದ್ದ ಕಳ್ಳ ಮನೆಯ ಒಳಗೆ ನುಗ್ಗಿದ್ದಾನೆ. ಯೋಗೇಶ್ವರಿ ಅವರ 8 ವರ್ಷದ ಪುತ್ರನಿಗೆ ಥಳಿಸಿ, ಕೊಠಡಿಯೊಳಗೆ ಕೂಡಿ ಹಾಕಿದ್ದಾನೆ. ಬಾಲಕನಿಗೆ ಬೆದರಿಕೆಯೊಡ್ಡಿದ್ದಾನೆ. ಬಳಿಕ ಬಾಗಿಲಿನ ಹಿಂದೆ ಅಡಗಿ ಕುಳಿತಿದ್ದ ಕಳ್ಳ, ಕಸ ಹಾಕಿ ಮನೆಯೊಳಗೆ ಬರುತ್ತಿದ್ದಂತೆಯೇ ಕಲ್ಲಿನಿಂದ ತಲೆಗೆ ಹೊಡೆದು, ಚಾಕು ತೋರಿಸಿ ಹಣ, ಒಡವೆ ನೀಡು ಬೆದರಿಕೆ ಹಾಕಿದ್ದಾನೆ.
ಮಗನ ಚಿಕಿತ್ಸೆಗಾಗಿ ಇಟ್ಟಿದ್ದ ಹಣವನ್ನು ಕಳ್ಳ ದೋಚಿ ಪರಾರಿಯಾಗಿದ್ದಾನೆ. ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದೃಶ್ಯ ಆಧರಿಸಿ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.



