ದಾವಣಗೆರೆ: ರೈತರು, ವರ್ತಕರಿಂದ ಮೆಕ್ಕೆಜೋಳ ಖರೀದಿಸಿ 2.68 ಕೋಟಿ ವಂಚನೆ ಪ್ರಕರಣ ಭೇದಿಸಿದ ಡಿವೈಎಸ್ಪಿ ಬಿ.ಎಸ್ . ಬಸವರಾಜ್ ತಂಡಕ್ಕೆ ಸರ್ಕಾರದಿಂದ 1 ಲಕ್ಷ ಬಹುಮಾನ ನೀಡಲಾಗಿದೆ.
ಈ ವಂಚನೆ ಪ್ರಕರಣದಲ್ಲಿ ಅದರಲ್ಲೂ ರೈತರಿಗೆರ ಶೇ 100 ರಷ್ಟು ಹಣವನ್ನು ವಶಪಡಿಸಿಕೊಂಡ ಡಿಸಿಆರ್ ಬಿ ಘಟಕದ ಡಿವೈಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದ ತಂಡಕ್ಕೆ ಪೂರ್ವ ವಲಯದ ಐಜಿಪಿ ರವಿ ಎಸ್ ಅವರು ಸರ್ಕಾರದ ವತಿಯಿಂದ ನೀಡಿದ 1 ಲಕ್ಷ ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.
ಪ್ರಕರಣ ಭೇದಿಸಿದ ತಂಡದಲ್ಲಿ ಡಿವೈಎಸ್ ಪಿ ಬಸವರಾಜ್. ಬಿ.ಎಸ್, ಎಎಸ್ ಐ ಅಂಜನಪ್ಪ, ಸಿಬ್ಬಂದಿಗಳಾದ ಕೆ.ಸಿ. ಮಜೀದ್, ಕೆ.ಟಿ. ಆಂಜನೇಯ, ಡಿ. ರಾಘವೇಂದ್ರ, ಯು. ಮಾರುತಿ, ಪಿ. ಸುರೇಶ್, ನಟರಾಜ್, ಊ .ಬಿ. ಅಶೋಕ್, ಆರ್ . ರಮೇಶನಾಯ್ಕ್, ಸಿ ಎಸ್. ಬಾಲರಾಜ್, ಸಿ ಮಲ್ಲಿಕಾರ್ಜುನ, ಜಿ.ಎಸ್. ಬಸವರಾಜ್ ಇದ್ದರು. ಈ ಸಂದರ್ಭದಲ್ಲಿ ಎಸ್ ಪಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್ಪಿ ರಾಜೀವ್ ಉಪಸ್ಥಿತರಿದ್ದರು.
ಮಕ್ಕೆಜೋಳ ಮಾರಾಟ ಮಾಡಿದ 96 ರೈತರು ಹಾಗೂ 29 ವರ್ತಕರಿಗೆ 2.68 ಕೋಟಿ ವಂಚಿಸಿರುವುದಕ್ಕೆ ಸಂಬಂಧಿಸುದಂತೆ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಆರು ಆರೋಪಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಡಿಸಿಆರ್‌ಬಿ ಘಟಕದ ಡಿವೈಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ 13 ಜನರ ತಂಡ ರಚಿಸಿದ್ದರು. 96 ರೈತರಿಗೆ 1.51 ಕೋಟಿ , 29 ವರ್ತಕರಿಗೆ 1.17 ಕೋಟಿ ಸೇರಿ ಒಟ್ಟು 2.68 ಕೋಟಿ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿತ್ತು.
ಆರೋಪಿಗಳಾದ ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ(38), ದಾವಣಗೆರೆ ತಾಲ್ಲೂಕಿನ ನರಗನಹಳ್ಳಿಯ ಚೇತನ್(24), ದಾವಣಗೆರೆಯ ಸರಸ್ವತಿ ನಗರದ ಮಹೇಶ್ವರಯ್ಯ (35), ಹರಿಹರ ತಾಲ್ಲೂಕಿನ ಸಾಲಕಟ್ಟೆಯ ವಾಗೀಶ್(49), ಅದೇ ಗ್ರಾಮದ ಚಂದ್ರು(40) ಹಾಗೂ ದಾವಣಗೆರೆಯ ಪಿ.ಬಿ. ರಸ್ತೆಯ ನಿವಾಸಿಯಾದ ಕೆನರಾ ಬ್ಯಾಂಕ್ ನೌಕರ ಶಿವಕುಮಾರ್(59) ವಶಕ್ಕೆ ಪಡೆಯಲಾಗಿತ್ತು.
ದಾವಣಗೆರೆ ಎಪಿಎಂಸಿ ಯಾರ್ಡ್‌ನಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಗುಡಿಗುಡಾಳು ಗ್ರಾಮದ ಶಿವಲಿಂಗಯ್ಯ ಮಾಲೀಕತ್ವದ ಕೆ.ಸಿ.ಟ್ರೇಡರ್ಸ್ ಹಾಗೂ ಜಿ.ಎಂ.ಸಿ ಗ್ರೂಪ್ಸ್‌ಗೆ ರೈತರು ಹಾಗೂ ವರ್ತಕರು ಮೆಕ್ಕೆಜೋಳವನ್ನು ಮಾರಾಟ ಮಾಡಿದ್ದರು. ಆರೋಪಿಗಳು ಬ್ಯಾಂಕ್‌ನಲ್ಲಿ ಮೃತಪಟ್ಟವರ ಹೆಸರಿನಲ್ಲಿ ಖಾತೆ ತೆರೆದು, ಹಣ ಪಾವತಿಸಿರುವಂತೆ ದಾಖಲೆಯಲ್ಲಿ ಸೃಷ್ಠಿಸಿದ್ದರು. ವಿವಿಧ ರೈತರು ನೀಡಿದ ದೂರಿ ಆಧಾರ ದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.