ದಾವಣಗೆರೆ; ಜಿಲ್ಲೆಯ ಜಗಳೂರು ತಾಲ್ಲೂಕಿನ ಹಿರೇ ಮಲ್ಲನಹೊಳೆ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಮಲ್ಲನಹೊಳೆ ಕೆರೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಈಜಲು ಹೋಗಿದ್ದ ಕುರಿಗಾಹಿ ಯುವಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಚಿಕ್ಕಮಲ್ಲನಹೊಳೆ ಗ್ರಾಮದ ವೀರಣ್ಣ ಪುತ್ರ ವಿಜಯ್ (25) , ವಿಜಯನಗರ ಜಿಲ್ಲೆ ಆಲೂರು ಗ್ರಾಮದ ಲಿಂಗಣ್ಣ ಪುತ್ರ ರಾಜು (19) ಸಾವನ್ಬಪ್ಪಿದ ಯುವಕರಾಗಿದ್ದಾರೆ. ಈ ಯುವರಿಬ್ಬರು ಅಕ್ಕ- ತಂಗಿ ಮಕ್ಕಳಾಗಿದ್ದಾರೆ. ಬೇಸಿಗೆ ರಜೆ ಹಿನ್ನೆಲೆ ಕುರಿ ಮೇಯಿಸಲು ಹೋಗಿದ್ದರು. ಈ ವೇಳೆ ಬೇಸಿಗೆ ಶಕೆ ತಾಳಲಾರದೇ ಈಜಲು ಹೋಗಿದ್ದರು.
ರಾಜು ಆಳವಾದ ಗುಂಡಿಯಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ವಿಜಯ್ ಕೂಡ ಗುಂಡಿಯಲ್ಲಿ ಮುಳುಗಿದ್ದಾನೆ. ಆಗ ಇನ್ನೊಬ್ಬ ಯುವಕ ರಕ್ಷಿಸಲು ಹೋದರೂ ಸಾಧ್ಯವಾಗದಿದ್ದಾಗ ಕೆರೆಯಿಂದ ಹೊರ ಬಂದು ಜನರನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ, ಅಷ್ಟರಲ್ಲಿ ಯುವಕರಿಬ್ಬರು ಸಾವನ್ನಪ್ಪಿದ್ದರು. ಸ್ಥಳೀಯರು ಯುವಕರ ಮೃತ ದೇಹ ಹೊರ ತೆಗೆದಿದ್ದಾರೆ. ಯುವಕರನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



