ದಾವಣಗೆರೆ: ಕೊಲೆ, ಸುಲಿಗೆ, ಹಲ್ಲೆ, ದರೋಡೆ, ಗುಂಪು ಘರ್ಷಣೆ ಕೇಸ್ ನಲ್ಲಿ ಜಿಲ್ಲೆಯ 1400 ರೌಡಿ ಶೀಟರ್ ಗಳಿದ್ದು, ಇಂದು 207 ರೌಡಿಶೀಟರ್ ಗಳು ನಗರದ ಹೈಸ್ಕೂಲ್ ಮೈದಾನದಲ್ಲಿ ಪೆರೇಡ್ ನಡೆಸಿದರು.
ನಗರದಲ್ಲಿ ಸಮಾಜಘಾತಕ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಇನ್ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದ್ರೆ, ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ರಿಷ್ಯಂತ್ ಖಡಕ್ ವಾರ್ನಿಂಗ್ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1400 ರೌಡಿಶೀಟರ್ ಗಳಿದ್ದಾರೆ. ಅದರಲ್ಲಿ ಕೊಲೆ, ಸುಲಿಗೆ, ಹಲ್ಲೆ, ದರೋಡೆ ಕೇಸ್ ನಲ್ಲಿರುವ 207 ರೌಡಿಶೀಟರ್ ಹಾಗೂ ಇತರೆ 50 ರೌಡಿಗಳನ್ನು ಕರೆಸಿ ಪೆರೇಡ್ ನಡೆಸಲಾಗಿದೆ. ಎಲ್ಲಾ ಅಪರಾಧ ಹಿನ್ನೆಲೆಯುಳ್ಳ ರೌಡಿ ಶೀಟರ್ ಗಳಿಗೆ ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದರು. ಸಮಾಜದಲ್ಲಿ ಉತ್ತಮ ನಡೆತೆಯೊಂದಿಗೆ ಉತ್ತಮ ಪ್ರಜೆಗಳಾಗಿರುವಂತೆ ಸೂಚಿಸಿದರು.
ಪೆರೇಡ್ ನಲ್ಲಿ ರೌಡಿಶೀಟರ್ ಗಳ ಪ್ರಸ್ತುತ ವಿಳಾಸ, ಕೆಲಸದ ವಿವರ ಸೇರಿ ವೈಯಕ್ತಿಕ ವಿವರ ಪಡೆದುಕೊಳ್ಳಲಾಗಿದೆ. ಜತೆಗೆ ಪದೇ ಪದೇ ಸಮಾಜಘಾತಕ ಪ್ರಕರಣದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಒಳ್ಳೆಯ ನಡವಳಿಕೆ ಆಧಾರದ ಮೇಲೆ ಈ ವರ್ಷ 40 ಜನರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೆ ಈ ವರ್ಷ ಹೊಸದಾಗಿ 37 ರೌಡಿಶೀಟರ್ ಸೇರಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 1400 ರೌಡಿಶೀಟರ್ ಗಳಿದ್ದಾರೆ. ಇನ್ನು ಪದೇ ಪದೇ ಅಪಾರಧ ಕೃತ್ಯದಲ್ಲಿ ಭಾಗಿಯಾದ ಐದು ರೌಡಿಶೀಟರ್ ಗಡಿಪಾರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ ಬಸರಗಿ ರವರು, ಗ್ರಾಮಾಂತರ ಉಪ ವಿಭಾಗದ ಎ ಎಸ್ ಪಿ ರವರಾದ ಶ್ರೀಮತಿ ಕನ್ನಿಕಾ ಸಿಕ್ರೀವಾಲ್ , ನಗರ ಉಪ ವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಡಿಸಿ ಆರ್ ಬಿ ಘಟಕದ ಡಿವೈಎಸ್ಪಿ ಬಸವರಾಜ್ ಬಿ ಎಸ್, ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ಕೆ.ಎಂ ಸಂತೋಷ್ ರವರು ಹಾಗೂ ಪೊಲೀಸ್ ನಿರೀಕ್ಷಕರುಗಳು, ಪಿ ಎಸ್ ಐ ರವರುಗಳು ಉಪಸ್ಥಿತರಿದ್ದರು.



