ಹರಿಹರ: ತಾಲ್ಲೂಕಿನ ಪಟ್ಟಣದ ನಂದಿಗುಡಿ ರಸ್ತೆಯ ಸಾಯಿ ಬೇಕರಿಯಲ್ಲಿ ಇಬ್ಬರು ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಬೇಕರಿಯಲ್ಲಿಯೇ ಜಗಳವಾಡಿಕೊಂಡಿದ್ದು, ಇರ್ಫಾನ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಇನ್ಬೊಬ್ಬ ಅಭಿಷೇಕ್ ಎಂಬಾತನ ಎದೆಭಾಗ, ಕಣ್ಣಿಗೆ ಗಾಯವಾಗಿದೆ.
ಇಬ್ಬರಿಗೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಗಲಾಟೆ ವಿಷಯ ತಿಳಿಯುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಚದುರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಸ್ಥಳಕ್ಕೆ ಭೇಟಿ ನೀಡಿದರು. ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯ ಪರಿಶೀಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎರಡೂ ಸಮುದಾಯದವರು ಗಲಭೆ ನಡೆಯದಂತೆ ಯುವಕರಿಗೆ ತಿಳಿ ಹೇಳಬೇಕು ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಎಲ್ಲೆಡೆ ಪೊಲೀಸರು ಭದ್ರತೆ ಒಸಗಿಸಲಾಗಿದೆ.



