ದಾವಣಗೆರೆ: ಮೂವರು ಅಂತರ ಜಿಲ್ಲಾ ಕಳ್ಳರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 5.71 ಲಕ್ಷ ಮೌಲ್ಯದ 108 ಗ್ರಾಂ ಬಂಗಾರದ ಗಟ್ಟಿ ಮತ್ತು 1,100 ಗ್ರಾಂ ಬೆಳ್ಳಿ ವಸ್ತು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಮೂಲದ ಶೌಕತ್, ಅಲ್ತಾಫ್ ಹಾಗೂ ಮುದಾಸಿರ್ ಬಂಧಿತ ಆರೋಪಿಗಳಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳ ವಿರುದ್ಧ ಶಿವಮೊಗ್ಗ, ದಾವಣಗೆರೆ, ರಾಣೆಬೆನ್ನೂರು, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ನಗರದ ಜಗನ್ನಾಥ ಎಚ್.ಕೆ. ಎಂಬುವರ ಮನೆಯ ಬಾಗಿಲು ಮುರಿದ ಕಳ್ಳರು, 258 ಗ್ರಾಂ ಬಂಗಾರ ಆಭರಣಗಳು, 650 ಗ್ರಾಂ ಬೆಳ್ಳಿಯ ಸಾಮಗ್ರಿಗಳು ಹಾಗೂ 72,000 ನಗದು ಕಳವು ಮಾಡಿದ್ದರು. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ಪೊಲೀಸರ ತಂಡ ರಚಿಸಲಾಗಿತ್ತು.
ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ವಿವಿಧ ಜಿಲ್ಲೆಗಳಲ್ಲಿ 6 ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. 2 ಪ್ರಕರಣಗಳಲ್ಲಿ ಒಟ್ಟು 5.71 ಲಕ್ಷ ಮೌಲ್ಯದ 108 ಗ್ರಾಂ ಬಂಗಾರದ ಗಟ್ಟಿ ಮತ್ತು 1,100 ಗ್ರಾಂ ಬೆಳ್ಳಿಯ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, 4 ಪ್ರಕರಣಗಳಲ್ಲಿ ವಸ್ತು ಪತ್ತೆಯಾಗಬೇಕಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರ ಪತ್ತೆಗೆ ಡಿವೈಎಸ್‍ಪಿ ನರಸಿಂಹ ವಿ. ತಾಮ್ರಧ್ವಜ, ಸಿಪಿಐ ಎಚ್. ಗುರುಬಸವರಾಜ್ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಕಾಂತರಾಜ್ ಎಸ್., ರೇಣುಕಾ ಜಿ.ಎಂ., ಎಎಸ್‌ಐ ಕೆ.ಎಲ್. ತಿಪ್ಪೇಸ್ವಾಮಿ, ಸಿಬ್ಬಂದಿ ಆನಂದ ಎಂ. ಮುಂದಲಮನಿ, ಮಂಜಪ್ಪ, ಯೋಗೀಶ್ ನಾಯ್ಕ, ಭೋಜಪ್ಪ, ಮಂಜುನಾಥ, ತಿಮ್ಮಣ್ಣ, ರಾಘವೇಂದ್ರ, ಬಸವರಾಜ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.



