ದಾವಣಗೆರೆ: ಜೆಸಿಬಿ ಟೈರ್ ಗಳಿಗೆ ಗಾಳಿ ತುಂಬಿಸುವಾಗ ಭಾರೀ ಪ್ರಮಾಣದಲ್ಲಿ ಸ್ಫೋಟಗೊಂಡು ಒಬ್ಬ ಯುವಕ ಸಾವನ್ಬಪ್ಪಿದ ಘಟನೆ ಹರಿಹರ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ನಿಟ್ಟೂರಿನ ಮಾರುತಿ(26)ಮೃತಪಟ್ಟ ವ್ಯಕ್ತಿ. ಹರಪನಹಳ್ಳಿಯ ದುಗ್ಗಾವತಿಯ ಜೆಸಿಬಿಗಳಿಗೆ ಗಾಳಿ ತುಂಬಿಸಲು ಕುರುಬರಹಳ್ಳಿಗೆ ಟ್ರ್ಯಾಕ್ಟರ್ ನಲ್ಲಿ ಟೈರ್ ಹಾಕಿಕೊಂಡು ಬರಲಾಗಿತ್ತು. ಟ್ರ್ಯಾಕ್ಟರ್ ಟ್ರಾಲಿಯಲ್ಲಿಯೇ ಗಾಳಿ ತುಂಬಿಸುವ ವೇಳೆ ಜೆಸಿಬಿ ಟೈರ್ ಸ್ಫೋಟಗೊಂಡಿದೆ.
ಸ್ಫೋಟದ ರಭಸಕ್ಕೆ ಟ್ರಾಲಿಯಿಂದ ಯುವಕ ನಾಲ್ಕೈದು ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ದಾವಣಗೆರೆಯ ಎಸ್ ಎಸ್ ಆಸ್ಪತ್ರೆ ಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



