ದಾವಣಗೆರೆ: ಜಮೀನಿನಲ್ಲಿ ಅಡಿಕೆ ಮರ ಕಡಿದ ದ್ವೇಷಕ್ಕೆ ಮಹಿಳೆ ಕೊಲೆ ಮಾಡಿ ಭದ್ರಾ ನಾಲೆಗೆ ಎಸೆದ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಶುವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಕೆರೆ ಗ್ರಾಮದ ನೇತ್ರಾವತಿ (47) ಕೊಲೆಯಾದ ಮಹಿಳೆ. ಠಾಣಾ ವ್ಯಾಪ್ತಿಯ ಅರಕೆರೆ ಗೇಟ್ ನ ಕುಮಾರ ಎಚ್.ಜಿ. ಹಾಗೂ ಅರಕೆರೆ ಗ್ರಾಮದ ಚಿದಾನಂದಪ್ಪ ಬಂಧಿತರು ಆರೋಪಿಗಳಾಗಿದ್ದಾರೆ. ಬಸವಾಪಟ್ಟಣ ಠಾಣೆ ವ್ಯಾಪ್ತಿಯ ಕಣಿವೆ ಬಿಳಚಿ ಗ್ರಾಮದ ಬಳಿ ಮೇ 9ರಂದು ಭದ್ರಾ ನಾಲೆಯಲ್ಲಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಏ.20ರಂದು ಆರೋಪಿಗಳ ಜಮೀನಿನಲ್ಲಿ ನೇತ್ರಾವತಿ ಅವರು ಅಡಿಕೆ ಮರ ಕಡಿದಿದ್ದರು. ಇದರಿಂದ ಆಕ್ರೋಶಗೊಂಡು ಜಮೀನಿನಲ್ಲಿಯೇ ನೇತ್ರಾವತಿ ಕೊಲೆ ಮಾಡಿ ಸಮೀಪದ ಭದ್ರಾ ಚಾನಲ್‌ನಲ್ಲಿ ಎಸೆದಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ತಪ್ಪು ಒಪ್ಪಿಸಲಾಗಿದೆ.
ಬಸವಾಪಟ್ಟಣ ಭದ್ರಾ ನಾಲೆಯಲ್ಲಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನೀರುಗಂಟಿಯೊಬ್ಬರು ನೀಡಿದ ದೂರನ್ನು ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಸವಾಪಟ್ಟಣ ಪೊಲೀಸರು ಪರಿಶೀಲಿಸಿದಾಗ ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲಿದ್ದು, ಮಹಿಳೆಯ ಶವ ಎಂದು ಮೇಲ್ನೋಟಕ್ಕೆ ಕಂಡುಬಂದಿತು. ಕೊರಳಲ್ಲಿ ಹಗ್ಗ ಸುತ್ತಿದ ರೀತಿಯಲ್ಲಿ ಇದ್ದುದರಿಂದ ಕೊಲೆ ಮಾಡಿ ನಾಳೆಗೆ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಶವ ಪತ್ತೆ ನಂತರ ಗುರುತು ಪತ್ತೆಗಾಗಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ಪ್ರಕರಣಗಳ ಬಗ್ಗೆ ಪರಶೀಲನೆ ನಡೆಸಿದಾಗ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣಕ್ಕೂ ಮಹಿಳೆಯ ಚಹರೆಗೂ ಹೋಲಿಕೆ ಕಂಡು ಬಂದ ಮೇರೆಗೆ ತನಿಖೆ ಕೈಗೊಳ್ಳಲಾಯಿತು. ಶವವು ನೇತ್ರಾವತಿ ಅವರದ್ದು ಎಂದು ಕುಟುಂಬದವರು ಖಚಿತಪಡಿಸಿದರು. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಗೋಪಾಲ ನಾಯ್ಕ್ ನೇತೃತ್ವದ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.