ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಗಣೇಶ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಎಥನಾಲ್ ಘಟಕದ ಸೆಂಟ್ರಿಂಗ್ ಕುಸಿತದಿಂದ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ತಾಲೂಕಿನ ಕುಕ್ಕುವಾಡದ ದಾವಣಗೆರೆ ಸಕ್ಕರೆ ಕಾರ್ಖಾನೆಯ ಎಥೆನಾಲ್ ಘಟಕ ನಿರ್ಮಾಣದ ವೇಳೆ ಇಂದು ಮಧ್ಯಾಹ್ನ ಆರ್ಸಿಸಿ ಕುಸಿದು ಬಿದ್ದು ಮೂವರು ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದು, 5 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಕುಮಾರಕಡೆ ಗ್ರಾಮ ವಾಸಿ ಬಸಪ್ಪ ( 32), ಮಾನಪ್ಪ (32) ಸ್ಥಳದಲ್ಲೇ ಮೃತರಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪಶ್ಚಿಮ ಬಂಗಾಳದ ಮಜೀದ್ (28) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆ ಉಸಿರೆಳೆದರು.
ಆರ್ಸಿಸಿ ಕುಸಿಯುವ ಹಂತದಲ್ಲಿ ಕೆಲವರು ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಒಬ್ಬ ಕಾರ್ಮಿಕ ಮೇಲಿನ ಸರಳು ಹಿಡಿದೇ ನಿಂತಿದ್ದರು. ಒಂದು ಬೃಹತ್ ಪಿಲ್ಲರ್ ಪೂರ್ಣ ಬಿದ್ದಿದೆ. ಘಟನೆಗೆ ಕಳಪೆ ಕಾಮಗಾರಿ ಕಾರಣ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕ್ರೇನ್, ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದರು. ಹದಡಿ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.



