ದಾವಣಗೆರೆ: ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ವಿರುದ್ಧ ಜಿಲ್ಲಾ ಪೊಲೀಸರು ಸ್ವಯಂ ಪ್ರೇರಿತ ಎಫ್ ಐ ಆರ್ (first information report) ದಾಖಲಿಸಿಕೊಂಡಿದ್ದಾರೆ.
ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ಹೊಸದುರ್ಗ, ಕಡೂರು, ತರೀಕೆರೆ ತಾಲ್ಲೂಕಿನ ಗ್ರಾಮಗಳಿಗೆ ಕುಯುವ ನೀರು ಪೂರೈಕೆ ವಿರೋಧಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ಹಿನ್ನೆಲೆ ಲೋಕಿಕೆರೆ ನಾಗರಾಜ್ ಕೈಯಲ್ಲಿ ಕಲ್ಲು ಹಿಡಿದು ಜನರಲ್ಲಿ ಭೀತಿ ಸೃಷ್ಟಿಸಿದ ಆರೋಪ ಹಿನ್ನೆಲೆ ದೂರು ದಾಖಲಾಗಿದೆ.
ಒತ್ತಾಯ ಪೂರ್ವಕವಾಗಿ ದಾವಣಗೆರೆ ಬಂದ್ ನಡೆಸಿದ ಆರೋಪದ ಮೇರೆಗೆ ಲೋಕಿಕೆರೆ ನಾಗರಾಜ್ ವಿರುದ್ಧ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಭದ್ರಾ ಬಲದಂಡೆ ನಾಲೆ ಸೀಳಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಮತ್ತು ಜಿಲ್ಲಾ ರೈತ ಒಕ್ಕೂಟದ ವತಿಯಿಂದ ಶನಿವಾರ ದಾವಣಗೆರೆ ಬಂದ್ ಕರೆ ನೀಡಿದ್ದವು.
ಕೈಯಲ್ಲಿ ಕಲ್ಲು ಹಿಡಿದು ಬಸ್, ಆಟೋ ಚಾಲಕರು ವ್ಯಾಪಾರಿಗಳನ್ನು ಬೆದರಿಸಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಉದ್ದೇಶ ಪೂರ್ವಕವಾಗಿ ಭೀತಿ ಸೃಷ್ಟಿಸಿದ ಮತ್ತು ಅಪರಾಧಿಕ ಕೃತ್ಯದಲ್ಲಿ ತೊಡಗಿದ ಆರೋಪದ ಮೇರೆಗೆ ದೂರು ದಾಖಲಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.



