ದಾವಣಗೆರೆ: ಬ್ಯಾಂಕ್ ಕಿಟಕಿ ಮುರಿದು ಒಳನುಗ್ಗಿದ ಖತರ್ನಾಕ್ ದರೋಡೆಕೋರರು, ಲಾಕರ್ ನಲ್ಲಿದ್ದ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಬುದ್ದಿವಂತಿಕೆಯಿಂದ ಕಳ್ಳತನ ಮಾಡಿದಂತೆ ಕಾಣುವ ಖತರ್ನಾಕ್ ಗ್ಯಾಂಗ್ , ಪೊಲೀಸ್ ಶ್ವಾನಗಳಿಗೂ ಸಣ್ಣ ಸುಳಿವು ಸಿಗದಂತೆ ಬ್ಯಾಂಕ್ ತುಂಬಾ ಖಾರದ ಪುಡಿ ಎರಚಿದ್ದಾರೆ. ಇದಲ್ಲದೆ, ಬ್ಯಾಂಕ್ ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.
ಜಿಲ್ಲೆಯ ನ್ಯಾಮತಿ ಪಟ್ಟಣದ ಮುಖ್ಯ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ( ಭಾನುವಾರ) ರಾತ್ರಿ ಈ ಘಟನೆ ನಡೆದಿದ್ದು, ಇಂದು (ಅ.28) ಬೆಳ್ಳಗೆ ಬ್ಯಾಂಕ್ ಸಿಬ್ಬಂದಿ ಆಫೀಸ್ ಗೆ ಬಂದಾಗ ಕಳ್ಳತನ ಶಾಕ್ ಎದುರಾಗಿದೆ. 4 ಕೋಟಿ ರೂಪಾಯಿಗೂ ಅಧಿಕ ಚಿನ್ನಾಭರಣ ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ. ಖತರ್ನಾಕ್ ಗ್ಯಾಂಗ್ ದರೋಡೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಯಾವುದೇ ಸಣ್ಣ ಸುಳಿವು ಬಿಡದಂತೆ ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದಾರೆ.ಈ ಕೇಸ್ ಪೊಲೀಸರಿಗೂ ತಲೆನೋವಾಗಿದೆ.
ಕಳ್ಳರ ಓಡಾಟ, ಬೆವರು ವಾಸನೆ ಜಾಡು ಹಿಡಿದು ಕಳ್ಳರನ್ನು ಪೊಲೀಸ್ ಶ್ವಾನಗಳು ಹಿಡಿದು ಬಿಡುತ್ತವೆ. ಆದರೆ, ಈ ದರೋಡೆ ಗ್ಯಾಂಗ್, ಪೊಲೀಸರ ಶ್ವಾನಗಳಿಗೂ ಯಾವುದೇ ಸುಳಿವು ಸಿಗದಂತೆ ಮಾಡಿದ್ದಾರೆ. ತಾವೂ ಓಡಾಡಿದ ಕಡೆಯಲ್ಲೆಲ್ಲಾ ಖಾರದ ಪುಡಿ ಎರಚಿದ್ದಾರೆ. ಶ್ವಾನ ದಳದ ದಾರಿ ತಪ್ಪಿಸಲು ಇಡೀ ಬ್ಯಾಂಕ್ ನಲ್ಲಿ ಖಾರದ ಪುಡಿ ಎರಚಿದ್ದಾರೆ. ಬ್ಯಾಂಕ್ ಸಿಸಿಟಿವಿ ಇಲ್ಲದಿದ್ದರಿಂದ ಪೊಲೀಸರು ಇಡೀ ನಗರದ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.
ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಪಿಐ ಎನ್.ಎಸ್.ರವಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ದರೋಡೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.



