Connect with us

Dvgsuddi Kannada | online news portal | Kannada news online

ದಾವಣಗೆರೆ: ಕೋವಿಡ್ ನಿರ್ವಹಣೆ ತುರ್ತು ಸಭೆ; ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ: ಡಿಸಿ  ಮಹಾಂತೇಶ್ ಬೀಳಗಿ

ದಾವಣಗೆರೆ

ದಾವಣಗೆರೆ: ಕೋವಿಡ್ ನಿರ್ವಹಣೆ ತುರ್ತು ಸಭೆ; ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ: ಡಿಸಿ  ಮಹಾಂತೇಶ್ ಬೀಳಗಿ

ದಾವಣಗೆರೆ:  ಕೋವಿಡ್‍ಗೆ ನಿಯಂತ್ರಣಕ್ಕೆ ತಜ್ಞರ ಸಮಿತಿ ಸಭೆ, ಡೆತ್ ಆಡಿಟ್ ಸಮಿತಿ ಪುನಾರಚನೆ, ಔಷಧಗಳ ಉಸ್ತುವಾರಿ ಫ್ಲೈಯಿಂಗ್ ಸ್ಕ್ವಾಡ್ ರಚನೆ ಹೀಗೆ  ವಿವಿಧ ವ್ಯವಸ್ಥೆಗಳನ್ನು ನಿರ್ವಹಿಸಲು ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ಅಗತ್ಯ ಸಿದ್ಧತೆಗೆ ತುರ್ತು ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಡಿಹೆಚ್‍ಓ, ಡಿಎಸ್, ಡಿಎಸ್‍ಓ ಮತ್ತು ಎರಡು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ತುರ್ತು ಸಭೆ ನಡೆಸಿ ಕೋವಿಡ್ ಪರಿಣಾಮಕಾರಿ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಂಡು, ವಿವಿಧ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದರು.

ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಎಲ್ಲರೂ ಒಂದು ತಂಡದಲ್ಲಿ ಶ್ರದ್ದೆಯಿಂದ ಕಾರ್ಯ ನಿರ್ವಹಿಸಬೇಕು. ಮೊದಲನೆಯದಾಗಿ ಜಿಲ್ಲೆಯಲ್ಲಿ ಸಂಭವಿಸುವ ಕೋವಿಡ್ ಅಥವಾ ನಾನ್ ಕೋವಿಡ್ ಸಾವು ಕುರಿತು ವಿಶ್ಲೇಷಣೆ ನಡೆಸಲು ಈ ಹಿಂದೆ ರಚಿಸಲಾಗಿದ್ದ ಡೆತ್ ಆಡಿಟ್ ಸಮಿತಿಯನ್ನು ತಕ್ಷಣವೇ ಮರು ರಚಿಸಿ, ಇಂದಿನಿಂದಲೇ ಸಂಭವಿಸುವ ಯಾವುದೇ ಸಾವಿನ ವರದಿಯನ್ನು ನೀಡಬೇಕೆಂದು ಡಿಹೆಚ್‍ಓ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.

ತಜ್ಞರ ಸಮಿತಿ ಸಭೆ: ವೈದ್ಯಕೀಯ ತಜ್ಞರ ಸಮಿತಿಯ ಸದಸ್ಯರು ಪ್ರತಿ ಎರಡು ದಿನಗಳಿಗೆ ಒಮ್ಮೆ ಸಭೆಯನ್ನು ನಡೆಸಿ, ಆಸ್ಪತ್ರೆಯ ಸಕ್ರಿಯ ಪ್ರಕರಣಗಳು, ಆಕ್ಸಿಜನ್ ಬೆಡ್‍ಗಳಲ್ಲಿ ಎಷ್ಟು ಜನ ರೋಗಿಗಳು ಯಾವ ಸ್ಥಿತಿಯಲ್ಲಿದ್ದಾರೆ, ಯಾರಿಗೆ ಏನು ಅವಶ್ಯಕತೆ ಇದೆ ಹಾಗೂ ಮುಂದಿನ ಹತ್ತು ದಿನಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಿ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ಫ್ಲೈಯಿಂಗ್ ಸ್ಕ್ವಾಡ್ ರಚನೆ : ಜಿಲ್ಲಾಸ್ಪತ್ರೆ ಉಗ್ರಾಣ ಹಾಗೂ ಇತರೆ ಕೋವಿಡ್ ನಿರ್ವಹಿಸುತ್ತಿರುವ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧಗಳ ಲಭ್ಯತೆ ಹಾಗೂ ಔಷಧಗಳ ಬಳಕೆ, ಹೆಚ್ಚಿನ ಬಳಕೆ ಮತ್ತು ದುರ್ಬಳಕೆ ಕುರಿತು ಉಸ್ತುವಾರಿ ನೋಡಿಕೊಳ್ಳಲು ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗುವುದು. ಈ ಫ್ಲೈಯಿಂಗ್ ಸ್ಕ್ವಾಡ್ ಪೊಲೀಸರ ಸಹಾಯ ಪಡೆದುಕೊಂಡು ಉಗ್ರಾಣ, ಫಾರ್ಮಸಿಗಳಿಗೆ ಭೇಟಿ ನೀಡಿ ಕೋವಿಡ್‍ಗೆ ಸಂಬಂಧಿಸಿದ ಯಾವುದೇ ಔಷಧಿ, ಲಸಿಕೆ ಕುರಿತು ಪರಿಶೀಲಿಸಿ ಔಷಧ ಲಭ್ಯತೆ ಮತ್ತು ಬಳಕೆ ಬಗ್ಗೆ ವಿವರವಾದ ವರದಿ ನೀಡಬೇಕು ಎಂದರು.

ಕೆಪಿಎಂಇ ಅಡಿಯಲ್ಲಿ ಕಳೆದ ಬಾರಿ ರಚಿಸಲಾಗಿದ್ದ ತಂಡಗಳನ್ನು ಪುನಾರಚಿಸಲಾಗುವುದು. ಈ ತಂಡಗಳು ಮೆಡಿಕಲ್ ಶಾಪ್‍ಗಳ ವರದಿ ಮತ್ತು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ರೆಮಿಡಿಸಿವಿರ್ ಸೇರಿದಂತೆ ಇತರೆ ಲಸಿಕೆ ಮಾರಾಟ ಮಾಡುತ್ತಿದ್ದರೆ ಅಂತಹ ಆಸ್ಪತ್ರೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರೋಗಿಗಳು, ಬೆಡ್‍ಗಳು, ಆಕ್ಸಿಜನ್, ಪರೀಕ್ಷೆಗಳು, ಬಿಡುಗಡೆ ಕುರಿತಾಗಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಪ್ರತಿಯೊಂದು ವಿಭಾಗಕ್ಕೂ ಒಬ್ಬೊಬ್ಬ ನುರಿತ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ. ಹಾಗೂ ಡೆತ್ ಆಡಿಟ್ ಸಮಿತಿ ಪುನಾರಚನೆ, ತಜ್ಞರ ಸಭೆ, ಸಿಸಿಸಿ ಸ್ಥಾಪನೆ, ಅಗತ್ಯ ಸಿಬ್ಬಂದಿ ನೇಮಕ, ಆಂಬುಲೆನ್ಸ್ ಖರೀದಿ ಹಾಗೂ ಅಗತ್ಯ ಔಷಧ ಮತ್ತು ಇತರೆ ಸುರಕ್ಷತಾ ಪರಿಕರಗಳು ಸೇರಿದಂತೆ ಕೋವಿಡ್‍ನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಲು ಎಲ್ಲ ರೀತಿಯ ಸಿದ್ದತೆಯನ್ನು ವ್ಯವಸ್ಥಿತವಾಗಿ ಮಾಡಲು ಈ ತುರ್ತು ಸಭೆಯಲ್ಲಿ ನಿರ್ಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಆಕ್ಸಿಜನ್ ನಿರ್ವಹಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿ : ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಸರಬರಾಜು ಮಾಡಲು ಪ್ರತಿ ವಾರ್ಡುಗಳಿಗೆ ತೆರಳಿ ಯಾರಿಗೆ ಯಾವ ರೀತಿಯ ಆಕ್ಸಿಜನ್ ಅಗತ್ಯವಿದೆ ಎಂದು ವಿಶ್ಲೇಷಿಸಿ ನಿರ್ಧರಿಸಿ ಕ್ರಮ ಕೈಗೊಳ್ಳಲು ಪ್ರತ್ಯೇಕವಾಗಿ ಒಬ್ಬ ತಜ್ಞರನ್ನು ಆಕ್ಸಿಜನ್ ನಿರ್ವಹಣಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದರು.

ಆರ್‍ಟಿಪಿಸಿಆರ್ ಲ್ಯಾಬ್ ನಿರ್ವಹಣೆಗೆ ನೋಡಲ್ ಅಧಿಕಾರಿ : ಪ್ರತಿ ದಿನ ಎಷ್ಟು ಪರೀಕ್ಷೆಗಳು ನಡೆಯುತ್ತಿವೆ. ಹಾಗೂ ಸಂಪೂರ್ಣ ಲ್ಯಾಬ್‍ನ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಕ್ರಮ ವಹಿಸಲು ಡಾ.ಗಂಗಾಧರ್ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದರು.

ಪ್ರಸ್ತುತ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕದ ಪರೀಕ್ಷೆಗಳು ಸಾಕಷ್ಟು ಆಗುತ್ತಿದ್ದರೂ ಡಾಟಾ ಎಂಟ್ರಿಯಲ್ಲಿ ಅದು ಸರಿಯಾಗಿ ಅಪ್‍ಡೇಟ್ ಮಾಡದೇ ಇರುವ ಕಾರಣ ರಾಜ್ಯ ವರದಿಯಲ್ಲಿ ಕಡಿಮೆ ತೋರಿಸುತ್ತಿದೆ. ಆದ ಕಾರಣ ಟಿಹೆಚ್‍ಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಡಾಟಾ ಎಂಟ್ರಿ ಸಮರ್ಪಕವಾಗಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಸಿಜಿ ಆಸ್ಪತ್ರೆಯಲ್ಲಿ ಪ್ರಸ್ತುತ 2000 ಪೂಲಿಂಗ್ ಪರೀಕ್ಷೆ ಮಾಡಿಸುವ ಸಾಮಥ್ರ್ಯ ಇದೆ. ಸಕ್ರಿಯ ಪ್ರಕರಣದ 10 ಪಟ್ಟು ಟೆಸ್ಟ್ ಆಗಬೇಕಿದ್ದು, ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಹಾಗೂ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಅಗತ್ಯ ಔಷಧಿಗಳು ಮತ್ತು ಸುರಕ್ಷತಾ ಪರಿಕರ ಖರೀದಿಗೆ ಕ್ರಮ ವಹಿಸಲಾಗಿದೆ ಎಂದರು.

ಇಂದು ಕೋವಿಡ್ ಲಸಿಕೆಯ ಗುರಿ 13000 ಸಾವಿರ ಇದ್ದು 7000 ಲಸಿಕೆ ಸರಬರಾಜಾಗಿದ್ದು ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಗರ ಹಾಗೂ ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 03 ಆಂಬುಲೆನ್ಸ್ ಖರೀದಿ ಹಾಗೂ ಶವ ವಾಹನ ಸಿದ್ದಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೋತಿವೀರಪ್ಪ ಕಾಲೇಜಿನಲ್ಲಿ ಲಸಿಕೆ : ಪ್ರಸ್ತುತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಯನ್ನು ಸಿಜಿ ಆಸ್ಪತ್ರೆ ಬದಲಾಗಿ ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದು.

ಮೇ 1 ರ ನಂತರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಇನ್ನೂ ಮಾರ್ಗಸೂಚಿಗಳು ಬಂದಿಲ್ಲ. ಆದರೂ ಈ ಲಸಿಕೆ ನೀಡಲು ಯುದ್ದದ ರೀತಿಯಲ್ಲಿ ಸನ್ನದ್ದರಾಗಬೇಕಿದ್ದು, ಮೈಕ್ರೋ ಪ್ಲಾನ್ ಸಿದ್ದಪಡಿಸಲಾಗುವುದು ಎಂದರು.

ಬೆಂಗಳೂರಿನ ರೋಗಿಗಳ ದಾಖಲು : ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗಿ ಬೆಡ್ ಸಿಗದೇ ಇರುವ ಕಾರಣಕ್ಕೆ ದಾವಣಗೆರೆಗೆ ಕೆಲವರು ಬಂದು ಖಾಸಗಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ವೈದ್ಯಾಧಿಕಾರಿಗಳು ನನ್ನ ಗಮನಕ್ಕೆ ತಂದು ದಾಖಲು ಮಾಡಿಕೊಳ್ಳಬೇಕು. ಮೊದಲು ಜಿಲ್ಲೆಯ ಅವಶ್ಯಕತೆಗಳನ್ನು ಪರಿಗಣಿಸಿ ನಂತರ ದಾಖಲಾತಿ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್‍ಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಅಧಿಕಾರಿಗಳ ತಂಡಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲಾಗುತ್ತಿದ್ದು ಉತ್ತಮ ಫಲಿತಾಂಶ ಬರುವಂತೆ ಎಲ್ಲರೂ ಕೆಲಸ ಮಾಡಬೇಕು. ತಾಲ್ಲೂಕು ನೋಡಲ್ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದ ಅವರು ಸಾರ್ವಜನಿಕರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.

ಸ್ವಯಂಪ್ರೇರಿತ ವೈದ್ಯರಿಗೆ ಸ್ವಾಗತ : ಕೋವಿಡ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೋವಿಡ್‍ಗೆ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಲು ಇಚ್ಚಿಸುವ ವೈದ್ಯರನ್ನು ಜಿಲ್ಲಾಡಳಿತ ಸ್ವಾಗತಿಸುತ್ತದೆ ಎಂದು ತಿಳಿಸಿದರು. ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಎಂಐಸಿಯು ನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸುತ್ತಿದ್ದು, ರೂಂ ನಂ.65 ಮತ್ತು 66 ರಲ್ಲಿ ಸ್ಟೆಪ್ ಡೌನ್ ಎಂಐಸಿಯು ಸ್ಥಾಪಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಅಗತ್ಯ ಸಿಬ್ಬಂದಿ ನೇಮಕ ಅಥವಾ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬಾಪೂಜಿ ಮತ್ತು ಎಸ್‍ಎಸ್ ಮೆಡಿಕಲ್ ಕಾಲೇಜುಗಳಿಂದ ತಲಾ ಒಬ್ಬರು ಮೈಕ್ರೋಬಯಾಲಜಿಸ್ಟ್‍ಗಳನ್ನು ತಾತ್ಕಾಲಿಕವಾಗಿ 2 ಅಥವಾ 3 ತಿಂಗಳ ಕಾಲ ಸಿಜಿ ಆಸ್ಪತ್ರೆಗೆ ನಿಯೋಜಿಸುವಂತೆ ಕಾಲೇಜುಗಳ ಮುಖ್ಯಸ್ಥರುಗಳಿಗೆ ಡಿಸಿ ಮನವಿ ಮಾಡಿದರು.

ಸಭೆಯಲ್ಲಿ ಎಸ್‍ಎಸ್ ಆಸ್ಪತ್ರೆಯ ಡಾ.ಕಾಳಪ್ಪನವರ್ ಮಾತನಾಡಿ, ರೋಗಿಗಳಿಗೆ ಲಿಕ್ವಿಡ್ ಆಕ್ಸಿಜನ್ ಉತ್ತಮವಾಗಿದ್ದು, ಇದರ ಲಭ್ಯತೆ ಹೆಚ್ಚಿಸಬೇಕೆಂದರು. ಬಾಪೂಜಿ ಆಸ್ಪತ್ರೆಯ ಡಾ.ರವಿ ಮಾತನಾಡಿ, ಲಿಕ್ವಿಡ್ ಆಕ್ಸಿಜನ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತ ಎಂದರು.

ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್ ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ವಿಶ್ವನಾಥ ಮುದಜ್ಜಿ, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‍ಎಲ್‍ಓ ರೇಷ್ಮಾ ಹಾನಗಲ್, ಡಿಹೆಚ್‍ಓ ಡಾ.ನಾಗರಾಜ್, ಡಿಎಸ್‍ಓ ಡಾ.ರಾಘವನ್, ಡಿಎಸ್ ಡಾ.ಜಯಪ್ರಕಾಶ್, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ಜಿಲ್ಲಾ ಮಲೇರಿಯಾಧಿಕಾರಿ ಡಾ.ನಟರಾಜ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್, ಡಾ.ರೇಣುಕಾರಾಧ್ಯ, ಡಾ.ಮುರಳೀಧರ ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top