ದಾವಣಗೆರೆ: ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸೆ. 28 ರಂದು ದಾವಣಗೆರೆ ತಾಲ್ಲೂಕಿನಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ, ಸಮುದಾಯ ಆರೋಗ್ಯ ಸಂಸ್ಥೆ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ 2500- ಡೋಸ್ ಕೋವ್ಯಾಕ್ಸಿನ್ ಹಾಗೂ 2500 ಡೋಸ್ ಕೋವಿಶೀಲ್ಡ್ ಸೇರಿದಂತೆ ಒಟ್ಟು 5000 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ವ್ಯಕ್ತಿಗಳು ಮೊದಲ ಹಾಗೂ ಎರಡನೆ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ಸದ್ಯ ಕೋವಿಡ್ ಪ್ರಕರಣಗಳು ಕಡಿಮೆ ದಾಖಲಾಗುತ್ತಿದ್ದು, ಸಾರ್ವಜನಿಕರು ಕೋವಿಡ್ ಕಡಿಮೆಯಾಗಿದೆ ಎಂದು ಭಾವಿಸಿ, ಲಸಿಕೆ ಹಾಕಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದರೆ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ತಪ್ಪದೆ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲೇಬೇಕಿದೆ. ಹೀಗಾಗಿ ಯಾವುದೇ ನಿರ್ಲಕ್ಷ್ಯ ತೋರದೆ ತಪ್ಪದೆ ಎಲ್ಲ ಅರ್ಹ ವ್ಯಕ್ತಿಗಳೂ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಗ್ರಾಮಗಳಲ್ಲಿನ ಆರೋಗ್ಯ ಸಂಸ್ಥೆಗಳಿಗೆ ಒಟ್ಟಾರೆ 1700 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ. ದಾವಣಗೆರೆ ನಗರದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ 500 ಡೋಸ್, ಸೇಂಟ್‍ಫಾಲ್ಸ್ ಶಾಲೆ ಬಳಿಯ ನಗರ ಆರೋಗ್ಯ ಕೇಂದ್ರಕ್ಕೆ 300 ಡೋಸ್ ಕೋವಿಶೀಲ್ಡ್ ಹಂಚಿಕೆ ಮಾಡಲಾಗಿದೆ. ಉಳಿದಂತೆ ಆಜಾದ್‍ನಗರ, ಬಾಷಾನಗರ, ಭಾರತ್ ಕಾಲೋನಿ, ದೊಡ್ಡಪೇಟೆ, ರಾಮನಗರ, ಹೆಚ್‍ಕೆಆರ್ ನಗರ, ಎಸ್‍ಎಂಕೆ ನಗರ ಹಾಗೂ ನಿಟ್ಟುವಳ್ಳಿ ನಗರ ಆರೋಗ್ಯ ಕೇಂದ್ರಗಳಿಗೆ ಒಟ್ಟಾರೆ 2500 ಡೋಸ್ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿದ್ದು, 18 ವರ್ಷ ಮೇಲ್ಪಟ್ಟ ಅರ್ಹರಿಗೆ 1ನೇ ಡೋಸ್ ಹಾಗೂ 2ನೇ ಡೋಸ್ ಲಸಿಕೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.



