ದಾವಣಗೆರೆ: ಹಳೇ ದಾವಣಗೆರೆ ಭಾಗದಲ್ಲಿ ಕೊರೊನಾ ಲಸಿಕೆ ಪಡೆಯಲು ವಿವಿಧ ಕಾರಣ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದವರಿಗೆ ಹಿಡಿದು ಲಸಿಕೆ ಹಾಕಲಾಯಿತು.
ಇಂದು ಹಳೇ ದಾವಣಗೆರೆ ಭಾಗದ ಭಾಷಾನಗರ, ಮುಸ್ತಫಾ ನಗರ, ಶಿವ ನಗರಗಳಲ್ಲಿ ಮನೆ ಮನೆಗಳಿಗೆ ತೆರಳಿ ಲಸಿಕೆ ಹಾಕಲಾಯಿತು. ಶಿವ ನಗರದಲ್ಲಿ ಸಾಕಷ್ಟು ಮನೆಯವರು ಲಸಿಕಾ ತಂಡ ನೋಡುತ್ತಿದ್ದಂತೆ ಓಡಿಹೋಗಿ ಬಾಗಿಲುಗಳನ್ನು ಬಂದ್ ಮಾಡಿಕೊಂಡರು. ಹಲವರು ಮೈಗೆ ಹುಷಾರಿಲ್ಲ, ಆಧಾರ್ ಕಾರ್ಡ್ ಇಲ್ಲ, ಎಂಬ ಕಾರಣ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ಲಸಿಕೆ ನೀಡಲಾಯಿತು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪ್ರಧಾನಮಂತ್ರಿ ನರೇಂದ್ರ ಮೋದಿಯ ಅವರು ‘ಹರ್ ಘರ್ ದಸ್ತಕ್’ ಘೋಷಣೆಯಂತೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ, ಪ್ರಮುಖವಾಗಿ ದಾವಣಗೆರೆ ಹಳೇ ಭಾಗದಲ್ಲಿ ಲಸಿಕಾಕರಣ ಕಡಿಮೆಯಿದ್ದು ಕಳೆದ ಮೂರು ದಿನಗಳಿಂದ ವೇಗ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಪ್ರತಿದಿನ 30 ರಿಂದ 35 ಸಾವಿರದಷ್ಟು ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಶುಕ್ರವಾರ(ಡಿ,3)ದೊಳಗೆ ಶೇಕಡಾ ನೂರರಷ್ಟು ಲಸಿಕೆ ಹಾಕುವ ಗುರಿ ಇದ್ದು ಯಶಸ್ವಿಯಾಗುವ ವಿಶ್ವಾಸವಿದೆ. ಲಸಿಕೆ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಟ್ಟ ಜನ, ತಪ್ಪು ಕಲ್ಪನೆಯಿಂದ ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ವಿವಿಧ ಪ್ರಕಾರದ ಮನವೊಲಿಕೆ ಮೂಲಕ ಮತ್ತು ಒತ್ತಡ ಹಾಕುವ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ ಎಂದರು.
ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತದ ಬಗೆಗೆ ನಿರ್ದೇಶನವಿಲ್ಲ, ಆದರೂ ಹೊಸದಾಗಿ ಬರುತ್ತಿರುವ ಓಮಿಕ್ರಾನ್‍ನಿಂದ ಬಚಾವಾಗಲು ಲಸಿಕೆ ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಈ ಲಸಿಕಾ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿಹೆಚ್‍ಓ ಡಾ.ನಾಗರಾಜು, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್, ಪೊಲೀಸ್ ಇಲಾಖಾ ಸಿಬ್ಬಂದಿ ಅಂಗನವಾಡಿ ಆಶಾ ಕಾರ್ಯಕರ್ತರು ಇದ್ದರು.